ಜಪಾನ್: ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ್ ಅವರ ನೇತೃತ್ವದ ಕರ್ನಾಟಕದ ಉನ್ನತ ಮಟ್ಟದ ನಿಯೋಗವು ಜಪಾನ್ನ ಟೊಯೊಟಾ ಕಂಪನಿಯ ತವರೂರಾದ ಐಚಿ (Aichi) ಪ್ರಾಂತ್ಯದಿಂದ ತನ್ನ ಅಧಿಕೃತ ಪ್ರವಾಸವನ್ನು ಸೋಮವಾರ ಆರಂಭಿಸಿತು.
ಟೋಕಿಯೊದಿಂದ ಶಿಂಕನ್ಸೆನ್ (ಬುಲೆಟ್ ರೈಲು) ಮೂಲಕ ನಗೋಯಾಕ್ಕೆ ಆಗಮಿಸಿದ ಸಿಎಂ ನೇತೃತ್ವದ ನಿಯೋಗವನ್ನು ಸ್ಥಳೀಯ ಕನ್ನಡ ಸಂಘದ ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಟೊಯೊಟಾ ನಗರದಲ್ಲಿರುವ ಟೊಯೊಟಾ ಮೋಟಾರ್ ಕಾರ್ಪೊರೇಷನ್ನ ‘ಮೊಟೊಮಾಚಿ’ (Motomachi) ಘಟಕಕ್ಕೆ ಭೇಟಿ ನೀಡಿತು.
ಹೂಡಿಕೆ ಮತ್ತು ಸುಸ್ಥಿರ ಸಂಚಾರ ವ್ಯವಸ್ಥೆಯ ಅಧ್ಯಯನ: ಟೊಯೊಟಾ ಸಂಸ್ಥೆಯ ಅಧ್ಯಕ್ಷರು ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಸಕಾಜು ಯೋಶಿಮುರಾ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಿ. ಶಂಕರ ಅವರ ನೇತೃತ್ವದ ಉನ್ನತ ಅಧಿಕಾರಿಗಳ ತಂಡದೊಂದಿಗೆ ನಿಯೋಗವು ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ಕರ್ನಾಟಕವು ಪ್ರಮುಖ ಉತ್ಪಾದನಾ ತಾಣ ಮತ್ತು ರಫ್ತು ಕೇಂದ್ರವಾಗಿ ಹೊರಮ್ಮಿರುವುದರ ಕುರಿತು ಟೊಯೊಟಾ ಸಂಸ್ಥೆ ಪ್ರಶಂಸಿಸಿತು.
ಬಿಡದಿಯಲ್ಲಿರುವ ಸಂಸ್ಥೆಯ ಜಂಟಿ ಉದ್ಯಮವಾದ ‘ಟೊಯೊಟಾ ಕಿರ್ಲೋಸ್ಕರ್ ಮೋಟಾರ್’ ನಲ್ಲಿ ವಾರ್ಷಿಕ ಸುಮಾರು 3.31 ಲಕ್ಷ ವಾಹನಗಳ ಉತ್ಪಾದನಾ ಸಾಮರ್ಥ್ಯದ ಎರಡು ಘಟಕಗಳನ್ನು ಹೊಂದಿದ್ದು, ಕ್ವಿನ್ ಸಿಟಿಯಲ್ಲಿ (KWIN City) ₹1,200 ಕೋಟಿ ವೆಚ್ಚದಲ್ಲಿ ‘ಟಿಕೆಎಂ ಬಿಜಿಂಟೆಲ್ ಹಬ್’ (TKM Bizintel Hub) ಸ್ಥಾಪನೆಯ ಬಗ್ಗೆ ಪ್ರಸ್ತಾಪ ಮಾಡಿತು. ಈ ಸಂದರ್ಭದಲ್ಲಿ ಕಂಪೆನಿಯ ಕರ್ನಾಟಕದಲ್ಲಿ ಮತ್ತಷ್ಟು ಹೂಡಿಕೆ ಹಾಗೂ ವಿಸ್ತರಣೆಗೆ ಕರ್ನಾಟಕ ಸರ್ಕಾರವು ಪೂರ್ಣ ಬೆಂಬಲ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಸಿಎಂ ನಿಯೋಗವು ಈ ಸಂದರ್ಭದಲ್ಲಿ ಭರವಸೆ ನೀಡಿತು.
ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಪ್ರಯಾಣ ಸೌಲಭ್ಯ ಕಲ್ಪಿಸಲು ಕರ್ನಾಟಕದಲ್ಲಿ ಟೊಯೊಟಾದ ಹೈಬ್ರಿಡ್ ಎಲೆಕ್ಟ್ರಿಕ್ ಮಾದರಿಯಾದ ‘ಜಪಾನ್ ಟ್ಯಾಕ್ಸಿ’ಯನ್ನು (Japan Taxi) ಪರಿಚಯಿಸುವಂತೆ ಸಿಎಂ ಆಹ್ವಾನ ನೀಡಿದರು. ಅಲ್ಲದೆ, ಭೇಟಿಯ ಸಂದರ್ಭದಲ್ಲಿ ಫ್ಲೆಕ್ಸ್-ಫ್ಯುಯೆಲ್ (Flex-fuel) ವಾಹನಗಳ ಬಿಡುಗಡೆ ಹಾಗೂ ಅವುಗಳ ಪ್ರಯೋಜನಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಕರ್ನಾಟಕ ಪದವೀಧರರೊಂದಿಗೆ ಮಾತುಕತೆ: ನಂತರ, 1959ರಲ್ಲಿ ಆರಂಭವಾದ ಏಷ್ಯಾದ ಮೊದಲ ನಾಗರಿಕ ಪ್ರಯಾಣಿಸಿದ ಕಾರು ಉತ್ಪಾದನಾ ಘಟಕವಾದ ‘ಮೊಟೊಮಾಚಿ’ ಘಟಕಕ್ಕೆ ನಿಯೋಗವು ಭೇಟಿ ನೀಡಿ ಪರಿಶೀಲಿಸಿತು. ಪ್ರಸ್ತುತ ಈ ಘಟಕದಲ್ಲಿ ಹೈಬ್ರಿಡ್, ಬ್ಯಾಟರಿ ಎಲೆಕ್ಟ್ರಿಕ್ ಮತ್ತು ಫ್ಯುಯೆಲ್ ಸೆಲ್ ಎಲೆಕ್ಟ್ರಿಕ್ ವಾಹನಗಳನ್ನು ಜೋಡಣೆ ಮಾಡಲಾಗುತ್ತಿದೆ. ಇದೇ ವೇಳೆ, ಟೊಯೊಟಾದ ‘ಗ್ಲೋಬಲ್ ಸ್ಕಿಲ್-ಅಪ್’ ತರಬೇತಿ ಕಾರ್ಯಕ್ರಮದಡಿ ಜಪಾನ್ನಲ್ಲಿ ತರಬೇತಿ ಪಡೆಯುತ್ತಿರುವ ಕರ್ನಾಟಕದ 20 ಐಟಿಐ (ITI) ಪದವೀಧರರೊಂದಿಗೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಮುಕ್ತ ಸಂವಾದ ನಡೆಸಿದರು. ತಮಗಾಗಿ ಭೇಟಿಯಾದ ನಾಯಕರನ್ನು ತರಬೇತುದಾರರು ತುಂಬುಹೃದಯದ ಕೃತಜ್ಞತೆ ಸಲ್ಲಿಸಿದರು. ಈ ಭೇಟಿಯು ವಿಶ್ವದಾದ್ಯಂತ ಹರಡಿರುವ ಕರ್ನಾಟಕದ ಕೌಶಲಯುಕ್ತ ಮಾನವ ಸಂಪನ್ಮೂಲದ ಶಕ್ತಿ ಹಾಗೂ ಕೈಗಾರಿಕಾ ಆಧಾರಿತ ತರಬೇತಿಯ ಮೌಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಟೊಯೊಟಾ ವಸ್ತುಸಂಗ್ರಹಾಲಯಗಳಿಗೆ ಭೇಟಿ: ದಿನದ ಅಂತ್ಯದಲ್ಲಿ ನಿಯೋಗವು ‘ಟೊಯೊಟಾ ಕೈಕಾನ್’ (Toyota Kaikan) ಹಾಗೂ ‘ಟೊಯೊಟಾ ಕೈಗಾರಿಕೆ ಮತ್ತು ತಂತ್ರಜ್ಞಾನ ಸ್ಮಾರಕ ವಸ್ತುಸಂಗ್ರಹಾಲಯ’ಕ್ಕೆ ಭೇಟಿ ನೀಡಿತು. ಜವಳಿ ಯಂತ್ರೋಪಕರಣಗಳ ಉದ್ಯಮದಿಂದ ವಿಶ್ವದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಟೊಯೊಟಾ ಬೆಳೆದುಬಂದ ಹಾದಿ, ಅದರ ಉತ್ಪಾದನಾ ತಂತ್ರ ಹಾಗೂ ದೂರದೃಷ್ಟಿಯನ್ನು ಸಿಎಂ ಹಾಗೂ ಸಚಿವರ ಆದಿಯಾಗಿ ನಿಯೋಗದ ತಂಡದ ಸದಸ್ಯರು ವೀಕ್ಷಿಸಿದರು. 1930ರ ದಶಕದಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಸಕಿಚಿ ಟೊಯೊಡಾ ಅವರು ಆರಂಭಿಸಿದ ಸ್ವಯಂಚಾಲಿತ ಮಗ್ಗವನ್ನು (loom) ಎಲ್ಲರೂ ಕುತೂಹಲದಿಂದ ವೀಕ್ಷಿಸಿದರು.
ಅಲ್ಲದೆ, ಎಲ್ಲರಿಗೂ ಸುರಕ್ಷಿತ, ಸುಸ್ಥಿರ ಮತ್ತು ಸುಗಮ ಸಂಚಾರ ಒದಗಿಸುವ ಟೊಯೊಟಾದ ಇತ್ತೀಚಿನ ವಾಹನಗಳು ಹಾಗೂ ತಂತ್ರಜ್ಞಾನಗಳ ಪ್ರದರ್ಶನವು ಪರಿಸರ ಸ್ನೇಹಿ ವಾಹನಗಳು ಮತ್ತು ಆಧುನಿಕ ಉತ್ಪಾದನಾ ವ್ಯವಸ್ಥೆಯನ್ನು ನಿರ್ಮಿಸುತ್ತಿರುವ ಕರ್ನಾಟಕಕ್ಕೆ ಅಮೂಲ್ಯ ಒಳನೋಟಗಳನ್ನು ತೆರೆದಿಟ್ಟಿತು.
’ಇನ್ವೆಸ್ಟ್ ಕರ್ನಾಟಕ 2027’ಕ್ಕೆ ಆಹ್ವಾನ: 2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ 2027’ರಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿಗಳು ಮತ್ತು ಕೈಗಾರಿಕಾ ಸಚಿವರು ಟೊಯೊಟಾ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ಖುದ್ದು ಆಹ್ವಾನ ನೀಡಿದರು.




















