Home Advertisement
Home ಸುದ್ದಿ ವಿದೇಶ ಕೋವಿಡ್ ಬಳಿಕ ಮತ್ತೊಂದು ಆತಂಕ: ಎಬೋಲಾ ವೈರಸ್ ಅಬ್ಬರ

ಕೋವಿಡ್ ಬಳಿಕ ಮತ್ತೊಂದು ಆತಂಕ: ಎಬೋಲಾ ವೈರಸ್ ಅಬ್ಬರ

0
101

ನವ ದೆಹಲಿ: ಜಗತ್ತು ಕೋವಿಡ್-19 ಮಹಾಮಾರಿಯ ಭೀಕರ ಅನುಭವದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಮತ್ತೊಂದು ಮಾರಕ ವೈರಸ್ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ.

ಆಫ್ರಿಕಾ ಖಂಡದ ಹಲವು ಭಾಗಗಳಲ್ಲಿ ವೇಗವಾಗಿ ಹರಡುತ್ತಿರುವ ಎಬೋಲಾ ವೈರಸ್ (Ebola Virus) ಸೋಂಕು ಇದೀಗ ವಿಶ್ವದ ಆರೋಗ್ಯ ವಲಯದ ಗಮನ ಸೆಳೆದಿದ್ದು, (WHO) ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ (PHEIC) ಘೋಷಿಸಿದೆ.

ಪ್ರಸ್ತುತ ಹರಡುತ್ತಿರುವ ಎಬೋಲಾ ವೈರಸ್‌ನ ಬುಂಡಿಬುಗ್ಯೊ ತಳಿಗೆ (Bundibugyo Strain) ಯಾವುದೇ ಅಧಿಕೃತ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಸೋಂಕಿನ ತೀವ್ರತೆ ಹೆಚ್ಚಿದರೆ ಸಾವಿನ ಪ್ರಮಾಣವೂ ಅತ್ಯಂತ ಹೆಚ್ಚಾಗಿರುವುದು ಆತಂಕ ಹೆಚ್ಚಿಸಿದೆ.

ಆರೋಗ್ಯ ತಜ್ಞರ ಪ್ರಕಾರ, ಈ ವೈರಸ್ ಕೋವಿಡ್‌ನಂತೆ ಗಾಳಿಯಲ್ಲಿ ವೇಗವಾಗಿ ಹರಡುವುದಿಲ್ಲ. ಎಬೋಲಾ ಮುಖ್ಯವಾಗಿ ಫ್ರೂಟ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯ ರಕ್ತ ಅಥವಾ ದೇಹದ ದ್ರವಗಳ ನೇರ ಸಂಪರ್ಕದಿಂದ ಮಾತ್ರ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದರೆ ಕಾಂಗೋ, ಉಗಾಂಡ ಸೇರಿದಂತೆ ಆಫ್ರಿಕಾ ದೇಶಗಳಿಂದ ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ವಿಶೇಷ ನಿಗಾ ವಹಿಸುವ ಅಗತ್ಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರೋಗ್ಯ ತಪಾಸಣೆ, ಸ್ಕ್ರೀನಿಂಗ್ ಹಾಗೂ ಅಗತ್ಯವಿದ್ದಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡುವುದು ಅತ್ಯಂತ ಮುಖ್ಯ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಸಾರ್ವಜನಿಕರು ಸಹ ಸದ್ಯಕ್ಕೆ ಆಫ್ರಿಕಾ ದೇಶಗಳಿಗೆ ಅನಗತ್ಯ ಪ್ರವಾಸ ತಪ್ಪಿಸುವಂತೆ ಸಲಹೆ ನೀಡಲಾಗಿದೆ.

ಎಬೋಲಾ ಸೋಂಕಿನ ಆರಂಭಿಕ ಲಕ್ಷಣಗಳಲ್ಲಿ ತೀವ್ರ ಜ್ವರ, ತಲೆನೋವು, ಮೈಕೈ ನೋವು, ವಾಂತಿ ಹಾಗೂ ಭೇದಿ ಪ್ರಮುಖವಾಗಿವೆ. ಸೋಂಕು ಗಂಭೀರ ಹಂತ ತಲುಪಿದರೆ ಲಿವರ್ ಮತ್ತು ಶ್ವಾಸಕೋಶ ವೈಫಲ್ಯ ಉಂಟಾಗಿ ಜೀವಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ಆರೋಗ್ಯ ಇಲಾಖೆ ಹಾಗೂ ಕೇಂದ್ರ ಸರ್ಕಾರವು ಪರಿಸ್ಥಿತಿಯನ್ನು ನಿಗಾ ವಹಿಸಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್ ಅನುಭವದ ನಂತರ ಜಾಗತಿಕ ಆರೋಗ್ಯ ವ್ಯವಸ್ಥೆಗಳು ಈಗಾಗಲೇ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿರುವುದರಿಂದ, ಸೋಂಕಿನ ವ್ಯಾಪಕ ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನಗಳು ಆರಂಭಗೊಂಡಿವೆ.