ಸಾಮಾಜಿಕ ಮಾಧ್ಯಮಗಳಲ್ಲಿ ಸೃಷ್ಟಿಯಾದ ಸಣ್ಣದೊಂದು ಗೊಂದಲ, ಶೇರು ಮಾರುಕಟ್ಟೆಯಲ್ಲಿ ಸಂಬಂಧವೇ ಇಲ್ಲದ ಕಂಪನಿಯೊಂದರ ಶೇರು ಮೌಲ್ಯ ದಿಢೀರ್ ಏರಿಕೆಯಾಗಲು ಕಾರಣವಾದ ವಿಚಿತ್ರ ಘಟನೆಯೊಂದು ನಡೆದಿದೆ. ಇಟಲಿ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಪ್ರಸಿದ್ಧ ‘ಮೆಲೋಡಿ’ ಚಾಕೊಲೇಟ್ ಪ್ಯಾಕೆಟ್‌ನ್ನ ಉಡುಗೊರೆಯಾಗಿ ನೀಡಿದ್ದರು. ಮೆಲೋನಿ ಈ ವಿಡಿಯೊವನ್ನು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಬೆನ್ನಲ್ಲೇ, ನೆಟ್ಟಿಗರು ಮೋದಿ ಮತ್ತು ಮೆಲೋನಿ ಹೆಸರನ್ನು ಜೋಡಿಸಿ ‘#Melodi’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದರು. ಕೋಟಿಗೂ ಅಧಿಕ ವೀಕ್ಷಣೆ ಪಡೆದ ಈ ವಿಡಿಯೋ ಶೇರು ಮಾರುಕಟ್ಟೆಯ ಹೂಡಿಕೆದಾರರ ಮೇಲೂ ಪ್ರಭಾವ ಬೀರಿದೆ.
ಜಾಲತಾಣಗಳ ಟ್ರೆಂಡ್ ಗಮನಿಸಿದ ವಹಿವಾಟುದಾರರು, ಮೆಲೋಡಿ ಚಾಕೊಲೇಟ್ ತಯಾರಿಸುವ ‘ಪಾರ್ಲೆ ಪ್ರಾಡಕ್ಟ್ಸ್’ ಕಂಪನಿಯೇ ಶೇರು ಮಾರುಕಟ್ಟೆಯಲ್ಲಿದೆ ಎಂದು ತಪ್ಪಾಗಿ ಭಾವಿಸಿದ್ದಾರೆ. ಶೇರು ಪೇಟೆಯಲ್ಲಿ ಲಿಸ್ಟ್ ಆಗಿರುವ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ವಲಯದ ‘ಪಾರ್ಲೆ ಇಂಡಸ್ಟ್ರೀಸ್’ (Parle Industries) ಕಂಪನಿಯ ಶೇರುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಇದರ ಪರಿಣಾಮವಾಗಿ, ಪಾರ್ಲೆ ಇಂಡಸ್ಟ್ರೀಸ್ ಶೇರು ಮೌಲ್ಯವು ಒಂದೇ ದಿನದಲ್ಲಿ ಶೇ 5 ರಷ್ಟು ಜಿಗಿದು ₹5.25 ತಲುಪಿತು. ವಾರದಲ್ಲೇ ಇದು ಶೇ 7 ರಷ್ಟು ಪ್ರಗತಿ ಸಾಧಿಸಿದೆ.
ಆದ್ರೆ ಅಸಲಿ ವಿಷಯವೆಂದರೆ, ನಾವೆಲ್ಲರೂ ಸವಿಯುವ ಪಾರ್ಲೆ-ಜಿ, ಮೊನಾಕೊ ಹಾಗೂ ಮೆಲೋಡಿ ಚಾಕೊಲೇಟ್ ತಯಾರಿಸುವ ಮಾತೃ ಸಂಸ್ಥೆ ‘ಪಾರ್ಲೆ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್’ ಶೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗೇ ಇಲ್ಲ, ಕೇವಲ ಹೆಸರಿನ ಸಾಮ್ಯತೆಯಿಂದಾಗಿ ಹೂಡಿಕೆದಾರರು ಗೊಂದಲಕ್ಕೀಡಾಗಿ, ಬಿಸ್ಕತ್ ಕಂಪನಿ ಎಂದುಕೊಂಡು ರಿಯಲ್ ಎಸ್ಟೇಟ್ ಕಂಪನಿಯ ಶೇರು ಖರೀದಿಸಿದ ಕಾರಣ ಸಂಬಂಧವೇ ಇಲ್ಲದ ಕಂಪನಿಯು ಲಾಭ ಮಾಡಿಕೊಂಡಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.






















