Home Advertisement
Home ಸುದ್ದಿ ವಿದೇಶ ಇರಾನ್ ಯುದ್ಧದ ನಡುವೆ ‘ಜಗವಿಕ್ರಮ’ ಇಂದು ಇಂಡಿಯಾಗೆ; ಕೋಟ್ಯಾಂತರ ಭಾರತೀಯರಿಗೆ ಗುಡ್‌ನ್ಯೂಸ್!

ಇರಾನ್ ಯುದ್ಧದ ನಡುವೆ ‘ಜಗವಿಕ್ರಮ’ ಇಂದು ಇಂಡಿಯಾಗೆ; ಕೋಟ್ಯಾಂತರ ಭಾರತೀಯರಿಗೆ ಗುಡ್‌ನ್ಯೂಸ್!

0
38

ಇರಾನ್ ಮತ್ತು ಅಮೆರಿಕ ನಡುವಿನ ತೀವ್ರ ಸಂಘರ್ಷದ ಹಾದಿಯಲ್ಲಿ ಒಂದು ತಾತ್ಕಾಲಿಕ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಭಾರತದ ಇಂಧನ ವಲಯಕ್ಕೆ ಒಂದು ಆಶಾದಾಯಕ ಸುದ್ದಿ ಲಭ್ಯವಾಗಿದೆ. ಸರಿಸುಮಾರು 20 ಸಾವಿರ ಟನ್ ಎಲ್‌ಪಿಜಿ ಹೊತ್ತ ‘ಜಗವಿಕ್ರಮ’ ಎಂಬ ಬೃಹತ್ ನೌಕೆಯು ಶನಿವಾರವಷ್ಟೇ ವಿಶ್ವದ ಅತ್ಯಂತ ಸೂಕ್ಷ್ಮ ಜಲಮಾರ್ಗವಾದ ಹೋರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದ್ದು, ಮಂಗಳವಾರ ಭಾರತದ ಬಂದರನ್ನು ತಲುಪುವ ನಿರೀಕ್ಷೆಯಿದೆ. ಈ ಜಲಸಂಧಿಯು ಯುದ್ಧದ ಹಿನ್ನೆಲೆಯಲ್ಲಿ ಅತ್ಯಂತ ಅಪಾಯಕಾರಿ ವಲಯವೆಂದು ಗುರುತಿಸಲ್ಪಟ್ಟಿತ್ತು, ಆದರೆ ಕದನ ವಿರಾಮದ ನಂತರ ಈ ಮಾರ್ಗವನ್ನು ಬಳಸಿದ ಭಾರತದ ಮೊದಲ ತೈಲ ನೌಕೆ ಎಂಬ ಹೆಗ್ಗಳಿಕೆಗೆ ಜಗವಿಕ್ರಮ ಪಾತ್ರವಾಗಿದೆ.

ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪನಿಗೆ ಸೇರಿದ ಈ ಬೃಹತ್ ಹಡಗು ವಾಸ್ತವವಾಗಿ 26 ಸಾವಿರ ಟನ್ ಎಲ್‌ಪಿಜಿಯನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಸದ್ಯದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಇದರಲ್ಲಿ 20 ಸಾವಿರ ಟನ್ ಇಂಧನವನ್ನು ಮಾತ್ರ ತುಂಬಿಸಲಾಗಿದೆ. ಒಟ್ಟು 24 ಮಂದಿ ಸಾಹಸಿ ನಾವಿಕರನ್ನೊಳಗೊಂಡ ತಂಡವು ಈ ಹಡಗಿನಲ್ಲಿದ್ದು, ಭಾರತದ ಇಂಧನ ಅಗತ್ಯತೆಯನ್ನು ಪೂರೈಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಯುದ್ಧ ಆರಂಭವಾದ ನಂತರ ಇಲ್ಲಿಯವರೆಗೆ ಭಾರತದ ಒಟ್ಟು ಒಂಬತ್ತು ತೈಲ ಹಡಗುಗಳು ಈ ಮಾರ್ಗವನ್ನು ದಾಟಿದ್ದು, ಅದರಲ್ಲಿ ಜಗವಿಕ್ರಮ ಇತ್ತೀಚಿನ ಸೇರ್ಪಡೆಯಾಗಿದೆ.

ಈ ಹಿಂದೆ ಇದೇ ಹಾದಿಯಲ್ಲಿ ಸಂಚರಿಸಿ ಭಾರತದ ಇಂಧನ ಭದ್ರತೆಯನ್ನು ಖಾತರಿಪಡಿಸಿದ ಇತರ ಎಂಟು ಪ್ರಮುಖ ನೌಕೆಗಳೆಂದರೆ ಎಂಟಿ ಶಿವಾಲಿಕ್, ಎಂಟಿ ನಂದಾದೇವಿ, ಪೈನಿ ಗ್ಯಾಸ್, ಜಗ್ ವಸಂತ್, ಬಿಡಬ್ಲೂ ಟಿವೈಆರ್, ಬಿಡಬ್ಲೂ ಇಎಲ್ಎಂ, ಗ್ರೀನ್ ಆಶಾ ಮತ್ತು ಗ್ರೀನ್ ಸಾನ್ವಿ. ಅಂತರಾಷ್ಟ್ರೀಯ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೂ ಈ ನೌಕೆಗಳು ಹೋರ್ಮುಜ್ ಜಲಸಂಧಿಯನ್ನು ದಾಟಿ ಬರುತ್ತಿರುವುದು ಭಾರತದ ಆರ್ಥಿಕತೆ ಮತ್ತು ಗೃಹಬಳಕೆಯ ಅನಿಲ ಪೂರೈಕೆಗೆ ದೊಡ್ಡ ಬಲವನ್ನು ನೀಡಿದೆ.