SK Home Ad
Home ಸುದ್ದಿ ರಾಜ್ಯ ಮೆಗಾ ಪೊಲೀಸ್ ಕಾರ್ಯಾಚರಣೆ: 1,041 ರೌಡಿಶೀಟರ್‌ಗಳ ಮನೆ ಜಾಲಾಡಿದ ಖಾಕಿ

ಮೆಗಾ ಪೊಲೀಸ್ ಕಾರ್ಯಾಚರಣೆ: 1,041 ರೌಡಿಶೀಟರ್‌ಗಳ ಮನೆ ಜಾಲಾಡಿದ ಖಾಕಿ

0
89

ಬೆಳಗಾವಿ: ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಉತ್ತರ ವಲಯದ ಐದು ಜಿಲ್ಲೆಗಳಲ್ಲಿ ಭಾನುವಾರ ನಸುಕಿನಲ್ಲೇ ಪೊಲೀಸರು ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದು, ಸಕ್ರಿಯವಾಗಿರುವ 1,041 ರೌಡಿಶೀಟರ್‌ಗಳ ಮನೆಗಳ ಮೇಲೆ ದಿಢೀರ್ ದಾಳಿ ಮಾಡಿದ್ದಾರೆ.

ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡಗಳಾಗಿ ಕಾರ್ಯಾಚರಣೆ ನಡೆಸಿವೆ. ರೌಡಿಶೀಟರ್‌ಗಳ ಮನೆಗಳನ್ನು ಜಾಲಾಡಿ, ಅವರ ಇತ್ತೀಚಿನ ಚಟುವಟಿಕೆ ಹಾಗೂ ಸಂಪರ್ಕಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ ಎಂದು ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 201, ವಿಜಯಪುರದಲ್ಲಿ 482, ಬಾಗಲಕೋಟೆಯಲ್ಲಿ 117, ಧಾರವಾಡದಲ್ಲಿ 46 ಹಾಗೂ ಗದಗ ಜಿಲ್ಲೆಯಲ್ಲಿ 195 ರೌಡಿಶೀಟರ್‌ಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಸಮರ್ಪಕ ದಾಖಲೆಗಳಿಲ್ಲದ 27 ವಾಹನಗಳು ಹಾಗೂ ರೌಡಿಶೀಟರ್‌ಗಳಿಗೆ ಸಂಬಂಧಿಸಿದ 9 ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ಎನ್‌ಡಿಪಿಎಸ್‌ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಜಪ್ತಿಯಾದ ವಾಹನಗಳು ಮತ್ತು ಶಸ್ತ್ರಾಸ್ತ್ರಗಳ ಮೂಲ, ಬಳಕೆ ಹಾಗೂ ಅವು ಅಪರಾಧ ಪ್ರಕರಣಗಳಲ್ಲಿ ಬಳಸಲ್ಪಟ್ಟಿವೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಕಾರ್ಯಾಚರಣೆಯಲ್ಲಿ ಪತ್ತೆಯಾದ ಅಕ್ರಮಗಳ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.

ರೌಡಿಶೀಟರ್‌ಗಳು ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆಯೇ, ಅವರೊಂದಿಗೆ ಸಂಪರ್ಕದಲ್ಲಿರುವವರು ಯಾರು, ಅಕ್ರಮ ಶಸ್ತ್ರಾಸ್ತ್ರ ಅಥವಾ ವಾಹನಗಳನ್ನು ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಈ ದಾಳಿಯ ಉದ್ದೇಶವಾಗಿದೆ.

ನಿರಂತರ ನಿಗಾ: “ರೌಡಿಶೀಟರ್‌ಗಳ ಚಲನವಲನದ ಮೇಲೆ ನಿರಂತರ ನಿಗಾ ಇರಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಉತ್ತರ ವಲಯದ ಎಲ್ಲ ಜಿಲ್ಲೆಗಳಲ್ಲೂ ಇಂತಹ ಕಾರ್ಯಾಚರಣೆ ಮುಂದುವರಿಯಲಿದೆ” ಎಂದು ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ ತಿಳಿಸಿದ್ದಾರೆ.

ಜಿಲ್ಲಾವಾರು ದಾಳಿ:
ವಿಜಯಪುರ — 482
ಬೆಳಗಾವಿ — 201
ಗದಗ — 195
ಬಾಗಲಕೋಟೆ — 117
ಧಾರವಾಡ — 46
ಒಟ್ಟು — 1,041