SK Home Ad
Home ಸುದ್ದಿ ದೇಶ ಮಾದಕದ್ರವ್ಯ ಮುಕ್ತ ಯುವಸಮೂಹ ನಿರ್ಮಾಣಕ್ಕೆ ಪ್ರಧಾನಿ ಮೋದಿ ಕರೆ

ಮಾದಕದ್ರವ್ಯ ಮುಕ್ತ ಯುವಸಮೂಹ ನಿರ್ಮಾಣಕ್ಕೆ ಪ್ರಧಾನಿ ಮೋದಿ ಕರೆ

0
66

ನವದೆಹಲಿ: ‘ವಿಕಸಿತ ಭಾರತಕ್ಕಾಗಿ ಮಾದಕದ್ರವ್ಯ ಮುಕ್ತ ಯುವಸಮೂಹ’ ಅಭಿಯಾನ ದೇಶಾದ್ಯಂತ ವೇಗವಾಗಿ ಸಾಗುತ್ತಿದ್ದು, ಯುವಜನತೆ ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಕರ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಭಾನುವಾರ ಪ್ರಸಾರವಾದ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್‌ ಕಿ ಬಾತ್‌’ನ 137ನೇ ಸರಣಿಯಲ್ಲಿ ಮಾತನಾಡಿದ ಅವರು, ‘ಡ್ರಗ್‌ ಫ್ರೀ ಇಂಡಿಯಾ’ ನಿರ್ಮಾಣಕ್ಕೆ ದೇಶದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗದೆ, ಇಡೀ ಕುಟುಂಬ ಹಾಗೂ ಸಮಾಜದ ಮೇಲೂ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಹಾಗೂ ವ್ಯಸನಕ್ಕೆ ಒಳಗಾದವರಿಗೆ ನೆರವು ನೀಡುತ್ತಿರುವ ಪ್ರತಿಯೊಬ್ಬರನ್ನೂ ಪ್ರಧಾನಿ ಶ್ಲಾಘಿಸಿದರು.

ಯುವಕರು ಹಾಗೂ ಸಾರ್ವಜನಿಕರು ಮಾದಕದ್ರವ್ಯ ಮುಕ್ತ ಭಾರತದ ಸಂದೇಶವನ್ನು ಸೃಜನಶೀಲವಾಗಿ ಜನರಿಗೆ ತಲುಪಿಸುವಂತೆ ಮೋದಿ ಮನವಿ ಮಾಡಿದರು. ಮಾದಕದ್ರವ್ಯ ಮುಕ್ತ ಭಾರತಕ್ಕಾಗಿ ಪರಿಣಾಮಕಾರಿ ಘೋಷಣೆಗಳನ್ನು ರೂಪಿಸುವುದು, ಯುವ ಸಂಗೀತಗಾರರು ಮಾದಕ ವಸ್ತುಗಳಿಂದ ದೂರವಿರುವ ಜೀವನದ ಮಹತ್ವ ಸಾರುವ ಹಾಡುಗಳನ್ನು ರಚಿಸುವುದು ಹಾಗೂ ವಿದ್ಯಾರ್ಥಿಗಳು ಮತ್ತು ನಾಟಕ ತಂಡಗಳು ಮಾದಕ ವಸ್ತುಗಳ ಅಪಾಯ ಮತ್ತು ವ್ಯಸನದಿಂದ ಹೊರಬರುವ ಮಾರ್ಗಗಳನ್ನು ಬಿಂಬಿಸುವ ಕಿರು ನಾಟಕಗಳನ್ನು ಪ್ರದರ್ಶಿಸುವಂತೆ ಸಲಹೆ ನೀಡಿದರು.

ದೇಶದಲ್ಲಿ ಪ್ರತಿಭಾವಂತ ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಕೊರತೆಯಿಲ್ಲ. ಸಮಾಜಕ್ಕೆ ಉಪಯುಕ್ತವಾಗುವಂತಹ ಜಾಗೃತಿ ಮೂಡಿಸುವ ವಿಷಯಗಳನ್ನು ವಿವಿಧ ಭಾರತೀಯ ಭಾಷೆಗಳಲ್ಲಿ ರಚಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬೇಕು. ಇಂತಹ ಸೃಜನಶೀಲ ಪ್ರಯತ್ನಗಳು ಕೆಲವೊಮ್ಮೆ ಔಪಚಾರಿಕ ಅಭಿಯಾನಗಳಿಗಿಂತಲೂ ಹೆಚ್ಚು ಪರಿಣಾಮಕಾರಿ ಆಗಬಹುದು ಎಂದು ಪ್ರಧಾನಿ ಹೇಳಿದರು.

ಭಾರತದ ಯುವಜನರನ್ನು ಮಾದಕದ್ರವ್ಯಗಳಂತಹ ಕೆಟ್ಟ ಚಟಗಳಿಂದ ದೂರವಿಡುವ ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಪಾತ್ರ ವಹಿಸಬೇಕು ಎಂದು ಕರೆ ನೀಡಿದ ಅವರು, #NashaMuktYuva ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪ್ರಯತ್ನಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದರು.