SK Home Ad
Home ಸುದ್ದಿ ದೇಶ ಬಂಗಾಳ ಚುನಾವಣೆ ಸೋತರೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಿ ಮೋದಿಗೆ TMC ಸಂಸದನ ಸವಾಲ್

ಬಂಗಾಳ ಚುನಾವಣೆ ಸೋತರೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಿ ಮೋದಿಗೆ TMC ಸಂಸದನ ಸವಾಲ್

0
257

ಕಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನ ಇಂದು ಶಾಂತಿಯುತವಾಗಿಯೇ ನಡೆದಿದ್ದರೂ, ರಾಜಕೀಯ ವಾಗ್ವಾದ ತಾರಕಕ್ಕೇರಿದೆ. ಈ ನಡುವೆ ಟಿಎಮ್​ಸಿ ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರೇನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರ ಸವಾಲು ಹಾಕಿರುವುದು ಗಮನಸೆಳೆಯಿತು.

“ಬಂಗಾಳದ 294 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ನಿಮ್ಮ ಪ್ರತಿರೂಪ ಎಂದು ನೀವು ಹೇಳಿದ್ದೀರ. ಮೇ 4ರಂದು ಫಲಿತಾಂಶದಲ್ಲಿ ತೃಣಮೂಲ ಕಾಂಗ್ರೆಸ್ ಗೆದ್ದರೆ, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ?” ಎಂದು ಅವರು ಪ್ರಶ್ನಿಸಿದರು.

ಫಲಿತಾಂಶ ಮೇ 4ಕ್ಕೆ : ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಎರಡು ಹಂತಗಳಲ್ಲಿ ನಡೆಯುತ್ತಿದೆ. ಹಂತ 1: ಏಪ್ರಿಲ್ 23, 2026 – 152 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದ್ದು. ಇಂದು ಹಂತ 2: ಏಪ್ರಿಲ್ 29, 2026 – ಉಳಿದ 142 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಒಟ್ಟು 294 ಕ್ಷೇತ್ರಗಳ ಫಲಿತಾಂಶ ಮೇ 4, 2026ರಂದು ಪ್ರಕಟವಾಗಲಿದೆ.

ಮತದಾನ ಪ್ರಮಾಣ 90% ಸಾಧ್ಯತೆ : ಇಂದು ಬೆಳಿಗ್ಗೆ 9 ಗಂಟೆಯ ವೇಳೆಗೆ ಸುಮಾರು 18.39% ಮತದಾನ ದಾಖಲಾಗಿತ್ತು. ಸಂಜೆ 5 ಗಂಟೆಯ ವೇಳೆಗೆ ಒಟ್ಟಾರೆ ಮತದಾನ ಪ್ರಮಾಣವು ಸುಮಾರು 89.99% ತಲುಪಿದೆ. ಜಿಲ್ಲಾವಾರು ಪ್ರಮುಖ ಪ್ರಮಾಣ (ಮಧ್ಯಾಹ್ನದ ವೇಳೆಗೆ): ಪೂರ್ವ ಬರ್ಧಮಾನ್ – 83.11%, ಹೂಗ್ಲಿ – 80.77%, ನಾಡಿಯಾ – 79.79% ಆಗಿದೆ. ಮತದಾನವು ಸಂಜೆ 6 ಗಂಟೆಯವರೆಗೆ ಮುಂದುವರಿದ ಹಿನ್ನೆಲೆಯಲ್ಲಿ ಅಂತಿಮ ಪ್ರಮಾಣವು 90% ದಾಟುವ ಸಾಧ್ಯತೆ ಇದೆ.

ಹಿಂಸಾಚಾರ ಮತ್ತು ಆರೋಪಗಳು : ಮತದಾನದ ವೇಳೆ ನಾಡಿಯಾ, ದಕ್ಷಿಣ 24 ಪರಗಣ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ರಾಜಕೀಯ ಕಾರ್ಯಕರ್ತರ ನಡುವೆ ಸಂಘರ್ಷಗಳು ನಡೆದಿದ್ದು, ಕೆಲವು ಕಡೆ ಹಿಂಸಾಚಾರದ ವರದಿಯಾಗಿದೆ. ಇನ್ನೊಂದೆಡೆ, ಇವಿಎಂ ಯಂತ್ರಗಳಲ್ಲಿ ಬಿಜೆಪಿ ಬಟನ್ ಮೇಲೆ ಟೇಪ್ ಹಾಕಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಪರಿಶೀಲನೆ ನಡೆಸಿ, ಆರೋಪ ಸಾಬೀತಾದರೆ ಮರು ಮತದಾನಕ್ಕೆ ಅವಕಾಶ ನೀಡುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ.

ಹಿಂದಿನ ಫಲಿತಾಂಶ : 2021ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತ್ತು. ಟಿಎಂಸಿ – 215 ಸ್ಥಾನಗಳು. ಬಿಜೆಪಿ – 77 ಸ್ಥಾನಗಳು. ಕಾಂಗ್ರೆಸ್ ಮತ್ತು ಎಡಪಕ್ಷಗಳು – ಶೂನ್ಯ ಪಲಿತಾಂಶ ಪಡೆದಿದ್ದವು.

ರಾಜಕೀಯ ಚರ್ಚೆ ಗರಿಗೆದರಿಕೆ : ಈ ಬಾರಿ ಚುನಾವಣೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಕಠಿಣ ಪೈಪೋಟಿ ಕಂಡುಬರುತ್ತಿದ್ದು, ಡೆರೆಕ್ ಒ’ಬ್ರೇನ್ ನೀಡಿದ ಸವಾಲು ರಾಜಕೀಯ ಚರ್ಚೆಗೆ ಇನ್ನಷ್ಟು ಇಂಧನ ನೀಡಿದೆ.