SK Home Ad
Home ಸುದ್ದಿ ದೇಶ ನಗ್ನ ಫೋಟೋಗಳಿಗೆ ದೇಶದ ರಹಸ್ಯ ಯುದ್ಧ ತಂತ್ರವನ್ನೇ ಮಾರಿದ ವಾಯುಪಡೆ ಅಧಿಕಾರಿ!: ಪಾಕ್ ಏಜೆಂಟ್ ಹನಿಟ್ರ್ಯಾಪ್...

ನಗ್ನ ಫೋಟೋಗಳಿಗೆ ದೇಶದ ರಹಸ್ಯ ಯುದ್ಧ ತಂತ್ರವನ್ನೇ ಮಾರಿದ ವಾಯುಪಡೆ ಅಧಿಕಾರಿ!: ಪಾಕ್ ಏಜೆಂಟ್ ಹನಿಟ್ರ್ಯಾಪ್ ಬಲೆಗೆ ಬಿದ್ದು ಮಹಾದ್ರೋಹ!

0
13

ನಗ್ನ ಫೋಟೋಗಳ ಆಸೆಗೆ ಬಿದ್ದ ಭಾರತೀಯ ವಾಯುಪಡೆಯ (IAF) ವಿಂಗ್ ಕಮಾಂಡರ್ ಒಬ್ಬರು ದೇಶದ ಅತ್ಯಂತ ಗೌಪ್ಯ ಯುದ್ಧ ತಂತ್ರಗಳು, ಡ್ರೋನ್ ಘಟಕಗಳ ಸಾಮರ್ಥ್ಯ ಮತ್ತು ಯುದ್ಧ ವಿಮಾನಗಳ ನಿಯೋಜನೆಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಏಜೆಂಟ್‌ಗೆ ಸೋರಿಕೆ ಮಾಡಿರುವ ಆಘಾತಕಾರಿ ಸಂಗತಿ ದೆಹಲಿ ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ.

ಅಧಿಕೃತ ರಹಸ್ಯಗಳ ಕಾಯ್ದೆಯಡಿ (Official Secrets Act) ಬಂಧನಕ್ಕೊಳಗಾಗಿ ಕಳೆದ ಐದು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಈ ಅಧಿಕಾರಿಯ ವಿರುದ್ಧ ಪೊಲೀಸರು ಗಂಭೀರ ಆರೋಪಪಟ್ಟಿ ಸಲ್ಲಿಸಿದ್ದಾರೆ.

2026ರ ಜನವರಿ 12 ರಿಂದ ಏಪ್ರಿಲ್ 1ರವರೆಗೆ ವಾಟ್ಸಾಪ್ ಮೂಲಕ ಪಾಕ್ ಏಜೆಂಟ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಅಧಿಕಾರಿ, “ನೀನು ಕಳುಹಿಸುವ ಪ್ರತಿಯೊಂದು ನಗ್ನ ಫೋಟೋಗೆ ಪ್ರತಿಯಾಗಿ ವಾಯುಪಡೆಯ ರಹಸ್ಯ ಯುದ್ಧ ಯೋಜನೆಯ ಒಂದೊಂದು ಪುಟವನ್ನು ಕಳುಹಿಸುತ್ತೇನೆ” ಎಂದು ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ.

ಏಪ್ರಿಲ್ 1ರಂದು ನಿಷೇಧಿತ ಕಚೇರಿ ಆವರಣಕ್ಕೆ ಸ್ಮಾರ್ಟ್‌ಫೋನ್ ತಂದಿದ್ದ ವೇಳೆ ತಪಾಸಣೆಗೆ ಒಳಗಾದಾಗ ಈ ಮಹಾದ್ರೋಹ ಬಯಲಾಗಿತ್ತು. ವಾಟ್ಸಾಪ್‌ನಲ್ಲಿ ಇಬ್ಬರ ನಡುವೆ ಬರೋಬ್ಬರಿ 3,008 ಸಂದೇಶಗಳು, 65 ಫೋಟೋಗಳು, 42 ವಾಯ್ಸ್ ಕಾಲ್ ಹಾಗೂ 4 ವಿಡಿಯೋ ಕಾಲ್‌ಗಳು ನಡೆದಿರುವ ಡಿಜಿಟಲ್ ಸಾಕ್ಷ್ಯವನ್ನು ಪೊಲೀಸರು ಕಲೆಹಾಕಿದ್ದಾರೆ.

ವಾಯುಪಡೆಯ ರಹಸ್ಯ ಡ್ರೋನ್ ಘಟಕದ ಸಾಮರ್ಥ್ಯ, ಶಸ್ತ್ರಾಸ್ತ್ರ ಗುರಿ ವ್ಯವಸ್ಥೆ, ಲೇಹ್‌ನಲ್ಲಿ ಯುದ್ಧ ವಿಮಾನಗಳ ನಿಯೋಜನೆ, ರಾಜಸ್ಥಾನದ ಸೂರತ್‌ಗಢದಲ್ಲಿ ನಡೆದ ಸೇನಾ ಸಮರಾಭ್ಯಾಸ ಹಾಗೂ ಯುದ್ಧದ ಸಂದರ್ಭದಲ್ಲಿ ಸೇನಾ ತುಕಡಿಗಳ ನಿಯೋಜನೆಯ ಸ್ಥಳಗಳಂತಹ ಅತಿ ಸೂಕ್ಷ್ಮ ವಿವರಗಳನ್ನು ಪಾಕ್ ಏಜೆಂಟ್‌ಗೆ ರವಾನಿಸಲಾಗಿದೆ.

ಅಷ್ಟೇ ಅಲ್ಲದೆ, ಪಾಕ್ ಏಜೆಂಟ್ ಕಳುಹಿಸಿದ್ದ ಸ್ಪೈವೇರ್ ಮತ್ತು ಮಾಲ್‌ವೇರ್ ಲಿಂಕ್‌ಗಳನ್ನು ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಐವರು ಕಿರಿಯ ಅಧಿಕಾರಿಗಳ ಮೊಬೈಲ್‌ಗಳಲ್ಲೂ ಇನ್‌ಸ್ಟಾಲ್ ಮಾಡುವ ಮೂಲಕ, ಅವರ ಗೌಪ್ಯ ಸಂವಹನವನ್ನೂ ಕದಿಯಲು ಸಂಚು ರೂಪಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.