Home Advertisement
Home ಸುದ್ದಿ ದೇಶ ತಮಿಳುನಾಡು: TVK ವಿಜಯಗೆ ಮ್ಯಾಜಿಕ್ ನಂಬರ್ ಮೀರಿದ ಬೆಂಬಲ

ತಮಿಳುನಾಡು: TVK ವಿಜಯಗೆ ಮ್ಯಾಜಿಕ್ ನಂಬರ್ ಮೀರಿದ ಬೆಂಬಲ

0
100

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ತೀವ್ರ ರಾಜಕೀಯ ಚಟುವಟಿಕೆಗಳಿಗೆ ಇದೀಗ ಬಹುತೇಕ ಅಂತ್ಯ ಕಂಡಿದ್ದು, ತಮಿಳಗ ವೆಟ್ರಿ ಕಳಗಂ(TVK) ಮುಖ್ಯಸ್ಥ ವಿಜಯ್ ಸರ್ಕಾರ ರಚನೆಗೆ ಅಗತ್ಯವಿದ್ದ ಮ್ಯಾಜಿಕ್ ನಂಬರ್‌ಗಿಂತಲೂ ಹೆಚ್ಚಿನ ಶಾಸಕರ ಬೆಂಬಲವನ್ನು ಪಡೆದಿದ್ದಾರೆ.

ಕಾಂಗ್ರೆಸ್‌, ಎಡಪಕ್ಷಗಳು ಮತ್ತು ವಿಸಿಕೆ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ನೇತೃತ್ವದ ಟಿವಿಕೆ ಒಟ್ಟು 121 ಶಾಸಕರ ಬೆಂಬಲ ಪಡೆದು ಸರ್ಕಾರ ರಚನೆಗೆ ಬಲಿಷ್ಠ ಹಾದಿಯಲ್ಲಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಅಗತ್ಯವಿತ್ತು.

ಆರಂಭದಲ್ಲಿ ಟಿವಿಕೆ 107 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತದ ಕೊರತೆ ಎದುರಿಸಬೇಕಾಗಿತ್ತು. ಇದೀಗ ಕಾಂಗ್ರೆಸ್‌ನ 5 ಶಾಸಕರು, ವಿಸಿಕೆ 2, ಸಿಪಿಐ 2, ಸಿಪಿಐ(ಎಂ) 2 ಮತ್ತು ಮುಸ್ಲಿಂ ಲೀಗ್‌ನ ಇಬ್ಬರು ಶಾಸಕರು ಬೆಂಬಲ ಘೋಷಿಸಿರುವುದರಿಂದ ವಿಜಯ್‌ಗೆ ಒಟ್ಟು 121 ಶಾಸಕರ ಬೆಂಬಲ ದೊರೆತಿದೆ.

ಈ ಬೆಂಬಲದೊಂದಿಗೆ ವಿಜಯ್ ಶೀಘ್ರದಲ್ಲೇ ರಾಜ್ಯಪಾಲರನ್ನು ಮತ್ತೆ ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದರೊಂದಿಗೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ತಮಿಳುನಾಡಿನ ರಾಜಕೀಯ ಹೈಡ್ರಾಮಾಕ್ಕೆ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ.

ಎಂ.ಕೆ. ಸ್ಟಾಲಿನ್ ಮನವಿ: ಇದೇ ವೇಳೆ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು, ಚುನಾವಣಾ ಆಯೋಗವು ಫಲಿತಾಂಶ ಪ್ರಕಟಿಸಿದ ಬಳಿಕ ಹೊಸ ಸರ್ಕಾರ ರಚನೆ ರಾಜ್ಯಘಟನಾ ಬದ್ಧ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಆಡಳಿತಾತ್ಮಕ ಶೂನ್ಯತೆ ಉಂಟಾಗಬಾರದು ಹಾಗೂ ಹೊಸ ಸರ್ಕಾರ ತಕ್ಷಣ ರಚನೆಯಾಗಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

BJPಗೆ ಹಿಂಬಾಗಿಲಿನ ಪ್ರವೇಶ ಬೇಡ: ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ವಿಜಯ್ ನೇತೃತ್ವದ ಟಿವಿಕೆಗೆ ಬೇಷರತ್ ಬೆಂಬಲ ನೀಡಿರುವುದಾಗಿ ಘೋಷಿಸಿವೆ. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಟಿ.ಟಿ. ಷಣ್ಮುಗಂ ಮಾತನಾಡಿ, “ಯಾವುದೇ ಪಕ್ಷಕ್ಕೂ ಸಂಪೂರ್ಣ ಬಹುಮತ ಸಿಕ್ಕಿಲ್ಲ. ಈ ಪರಿಸ್ಥಿತಿಯಲ್ಲಿ ಸರ್ಕಾರ ರಚನೆ ವಿಳಂಬವಾದರೆ ರಾಜ್ಯಪಾಲರ ಆಳ್ವಿಕೆ ಜಾರಿಗೆ ಬರುವ ಸಾಧ್ಯತೆ ಇದೆ. ಅದು ಬಿಜೆಪಿ ಹಿಂಬಾಗಿಲಿನಿಂದ ಪ್ರವೇಶಿಸುವಂತಾಗುತ್ತದೆ. ಅದನ್ನು ತಪ್ಪಿಸಲು ನಾವು ಟಿವಿಕೆಗೆ ಬೆಂಬಲ ನೀಡಿದ್ದೇವೆ,” ಎಂದು ಹೇಳಿದ್ದಾರೆ. “ನಾವು ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ. ಮರು ಚುನಾವಣೆ ಹಾಗೂ ಆಡಳಿತ ಅಸ್ಥಿರತೆ ತಪ್ಪಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ,” ಎಂದು ಸ್ಪಷ್ಟಪಡಿಸಿದರು.

ರಾಜಕೀಯ ವಿಶ್ಲೇಷಕರ ಪ್ರಕಾರ, ನಟ ವಿಜಯ್ ಅವರ ರಾಜಕೀಯ ಪ್ರವೇಶದ ಮೊದಲ ದೊಡ್ಡ ಪರೀಕ್ಷೆಯಲ್ಲೇ ಸರ್ಕಾರ ರಚನೆ ಹಂತ ತಲುಪಿರುವುದು ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಆಧಿಪತ್ಯದ ರಾಜ್ಯ ರಾಜಕೀಯದಲ್ಲಿ ಟಿವಿಕೆ ಹೊಸ ಶಕ್ತಿಯಾಗಿ ಹೊರಹೊಮ್ಮಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.