Home Advertisement
Home ಸುದ್ದಿ ದೇಶ ಪಂಚರಾಜ್ಯಗಳ ಕ್ಲೈಮ್ಯಾಕ್ಸ್ ಇಂದು

ಪಂಚರಾಜ್ಯಗಳ ಕ್ಲೈಮ್ಯಾಕ್ಸ್ ಇಂದು

0
45

ನವದೆಹಲಿ: ರಣ ರೋಚಕವಾಗಿ ಅಂತ್ಯ ಕಂಡಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಸೋಮವಾರ ನಡೆಯಲಿದ್ದು, ಸಂಜೆ ವೇಳೆಗೆ ಬಹುತೇಕ ಫಲಿತಾಂಶಗಳು ಹೊರಬೀಳುವ ನಿರೀಕ್ಷೆಯಿದೆ.

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿ ಮತದಾರರು ನೀಡಿರುವ `ಅಂತಿಮ ತೀರ್ಪು’ ಆಯಾ ರಾಜ್ಯಗಳ, ಆಯಾ ಕ್ಷೇತ್ರಗಳ ಸ್ಟ್ರಾಂಗ್ ರೂಂಗಳಲ್ಲಿನ ಇವಿಎಂಗಳಲ್ಲಿ ಗೌಪ್ಯವಾಗಿದ್ದು, ಸೋಮವಾರ ಬೆಳಗ್ಗೆ 8 ಗಂಟೆಗೆ ಅವನ್ನು ಹೊರತೆಗೆದು ಎಣಿಕೆ ಆರಂಭಿಸಲಾಗುವುದು.

ಆಯಾ ರಾಜ್ಯಗಳ ಎಲ್ಲ ಮತ ಎಣಿಕೆ ಕೇಂದ್ರಗಳ ಸುತ್ತ ವಿವಿಧ ಹಂತಗಳ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುಖ್ಯವಾಗಿ ಪಶ್ಚಿಮ ಬಂಗಾಳಕ್ಕೆ 165 ಹೆಚ್ಚುವರಿ ಎಣಿಕೆ ವೀಕ್ಷಕರು ಮತ್ತು 77 ಪೊಲೀಸ್ ವೀಕ್ಷಕರನ್ನು ನಿಯೋಜಿಸಲಾಗಿದೆ. ಅಂತೆಯೇ ಅಸ್ಸಾಂನಲ್ಲಿ 126 ಹಿರಿಯ ಐಎಎಸ್ ಅಧಿಕಾರಿಗಳನ್ನು ಹೊರ ರಾಜ್ಯಗಳಿಂದ ವೀಕ್ಷಕರನ್ನಾಗಿ ಕರೆಸಲಾಗಿದೆ. ಇವರ ಜೊತೆಗೆ 2348 ಸೂಕ್ಷ್ಮ ವೀಕ್ಷಕರೂ ಕಾರ್ಯ ನಿರ್ವಹಿಸಲಿದ್ದಾರೆ.

ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶಿಸುವ ಅಧಿಕೃತ ವ್ಯಕ್ತಿಗಳ ಗುರುತು ಪತ್ತೆಗಾಗಿ ಚುನಾವಣಾ ಆಯೋಗವು ಕ್ಯೂಆರ್ ಕೋಡ್ ಆಧಾರಿತ ಭಾವಚಿತ್ರ ಗುರುತಿನ ಚೀಟಿ ವ್ಯವಸ್ಥೆ ಕೈಗೊಂಡಿದೆ. ಇದರಿಂದಾಗಿ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಬ್ರೇಕ್ ಬಿದ್ದಂತಾಗಿದೆ.

ಬಂಗಾಳ 1 ಕ್ಷೇತ್ರದ ರಿಸಲ್ಟ್ ಇಂದಿಲ್ಲ: ಚುನಾವಣಾ ಅಕ್ರಮಗಳು ಇತ್ಯಾದಿ ವ್ಯಾಪಕವಾಗಿ ಬಂದ ದೂರುಗಳ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ತಾ ವಿಧಾನಸಭಾ ಕ್ಷೇತ್ರದ ಎಲ್ಲ 285 ಮತಗಟ್ಟೆಗಳಲ್ಲಿ ಮೇ 21ರಂದು ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶಿಸಿದೆ. ಅಂತೆಯೇ ಕ್ಷೇತ್ರದ ಮತ ಎಣಿಕೆ ಮೇ 24 ರಂದು ನಿಗದಿಯಾಗಿದೆ. ಆದರೆ ರಾಜ್ಯದ ಉಳಿದೆಲ್ಲ ಕ್ಷೇತ್ರಗಳ ಫಲಿತಾಂಶ ಸೋಮವಾರ ಪ್ರಕಟವಾಗುತ್ತಿದೆ. ಜೊತೆಗೆ ಆಡಳಿತಾರೂಢ ಟಿಎಂಸಿ ಕಾರ್ಯಕರ್ತರ ಗೂಂಡಾಗಿರಿ ಹಾಗೂ ಬೆದರಿಕೆ ವಿರುದ್ಧ ಫಾಲ್ತಾದಲ್ಲಿ ಸರ್ಕಾರದ ವಿರುದ್ಧ ಜನರೇ ಬೀದಿಗಿಳಿದಿದ್ದು, ಪ್ರತಿಭಟನೆ ಇನ್ನೂ ಮುಂದುವರೆದಿರುವುದರಿಂದ ಫಾಲ್ತಾ ಕ್ಷೇತ್ರಾದ್ಯಂತ ಅತ್ಯಂತ ವ್ಯಾಪಕ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.