ರಾಮನಗರ: ಕನ್ನಡ ರಾಜ್ಯೋತ್ಸವದ ಸಂಭ್ರಮದ ದಿನವೇ ಪ್ರಗತಿಪರ ಚಿಂತನೆ ಮತ್ತು ಸರಳ ಬದುಕಿನ ಆಶಯದೊಂದಿಗೆ ಅನಂತ ಕುಣಿಗಲ್ ಹಾಗೂ ಕೃಪಾ ಬಿ.ಎಂ. ದಂಪತಿ ಮಂತ್ರಮಾಂಗಲ್ಯ ಪದ್ಧತಿಯಲ್ಲಿ ವಿವಾಹವಾಗಿದ್ದಾರೆ.
ನವೆಂಬರ್ 1ರಂದು ರಾಮನಗರದ ಜನಪದ ಲೋಕದಲ್ಲಿ ಯಾವುದೇ ಆಡಂಬರ, ಅನಗತ್ಯ ಸಂಪ್ರದಾಯಗಳ ಹೊರೆ ಇಲ್ಲದೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಪೂಚಂತೇ ಅವರ ಪ್ರಗತಿಪರ ತತ್ವಗಳನ್ನು ಮನದಲ್ಲಿಟ್ಟುಕೊಂಡು, ರಾಷ್ಟ್ರಕವಿ ಕುವೆಂಪು ಅವರ ಮಂತ್ರಮಾಂಗಲ್ಯ ಸರಳ ವಿವಾಹ ಪದ್ಧತಿಯ ಆಶಯದಂತೆ ಮದುವೆಯಾಗಿರುವುದು ವಿಶೇಷವಾಗಿದೆ.
ಈ ವಿವಾಹ ಸಮಾರಂಭದಲ್ಲಿ ಹಿರಿಯ ಕಾದಂಬರಿಕಾರ ಕೆ.ಎನ್. ಗಣೇಶಯ್ಯ ಅವರು ಸರಳ ಬದುಕಿಗೆ ಅಗತ್ಯವಾದ 12 ಸಂಕಲ್ಪಗಳನ್ನು ಬೋಧಿಸುವ ಮೂಲಕ ಮಂತ್ರಮಾಂಗಲ್ಯ ವಿಧಿ ನೆರವೇರಿಸಿಕೊಟ್ಟರು. ಸರಳ ಬದುಕಿನ ಮೌಲ್ಯಗಳು ಹಾಗೂ ಆಡಂಬರವಿಲ್ಲದ ಸಂಬಂಧಗಳ ಗಟ್ಟಿತನದ ಕುರಿತು ವೀರಕಪುತ್ರ ಶ್ರೀನಿವಾಸ್ ಮಾತನಾಡಿ ನವದಂಪತಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಅನಂತ ಕುಣಿಗಲ್ ಅವರು ರಚಿಸಿರುವ ʻಸಾಯಲು ಸಮಯವಿಲ್ಲ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಫಾತಿಮಾ ರಲಿಯಾ ಅವರು ನವದಂಪತಿಗೆ ಶುಭ ಕೋರಿದರು.
ನಟಿ ರಂಜನಿ ರಾಘವನ್, ಹಿರಿಯ ಲೇಖಕರಾದ ನಾಗರಾಜ ವಸ್ತಾರೆ, ಮಂಜುನಾಥ್ ಚಾಂದ್, ಮಹೇಶ ಅರಬಳ್ಳಿ, ಶಿವಕುಮಾರ ಮಾವಲಿ, ರವೀಂದ್ರ ಮುದ್ದಿ, ಕೃಷ್ಣ ಚಂಗಡಿ, ಜಮೀಲ್ ಸಾವಣ್ಣ, ವಿಕ್ರಮ ಅಡಿಗ, ಕದಂಬ ನಾಗೇಶ್, ಮಂಜುನಾಥ್ ಕುಣಿಗಲ್ ಸೇರಿದಂತೆ ಹಲವು ಸಾಹಿತಿಗಳು, ಪ್ರಕಾಶಕರು ಹಾಗೂ ಓದುಗ ಮಿತ್ರರು ವಿವಾಹಕ್ಕೆ ಸಾಕ್ಷಿಯಾಗಿ ನವದಂಪತಿಯನ್ನು ಹರಸಿದರು.
12 ಸಂಕಲ್ಪಗಳೊಂದಿಗೆ ಹೊಸ ಬದುಕು: ಯಾವುದೇ ಪಂಥ, ಪೂರ್ವಾಗ್ರಹ ಅಥವಾ ಕುಟುಂಬದ ಒತ್ತಡಗಳಿಗೆ ಒಳಗಾಗದೆ, ಮಂತ್ರಮಾಂಗಲ್ಯದ ಆಶಯಗಳನ್ನು ಒಪ್ಪಿಕೊಂಡು 12 ಸಂಕಲ್ಪಗಳನ್ನು ರೂಪಿಸಿಕೊಂಡು ವಿವಾಹವಾಗಿರುವುದಾಗಿ ಅನಂತ ಕುಣಿಗಲ್ ಮತ್ತು ಕೃಪಾ ತಿಳಿಸಿದ್ದಾರೆ.
ಸರಳ ವಿವಾಹವಾಗಲು ಬಯಸುವವರಿಗೆ ಮಾರ್ಗದರ್ಶನವಾಗಲಿ ಎಂಬ ಉದ್ದೇಶದಿಂದ ತಾವು ರೂಪಿಸಿಕೊಂಡಿರುವ 12 ಸಂಕಲ್ಪಗಳ ವಿವರಗಳನ್ನು ಹಂಚಿಕೊಳ್ಳುವುದಾಗಿಯೂ ಹೇಳಿದ್ದಾರೆ.
ʻಯಾರನ್ನೋ ಮೆಚ್ಚಿಸಲು ಅಥವಾ ಮಾದರಿಯಾಗಬೇಕೆಂಬ ಉದ್ದೇಶದಿಂದ ಈ ವಿವಾಹ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿಲ್ಲ. ನಮ್ಮ ಮನಸ್ಸಿನ ಇಷ್ಟದಂತೆ, ಪ್ರಾಮಾಣಿಕತೆಯಿಂದ ಈ ದಾರಿಯನ್ನು ಆರಿಸಿಕೊಂಡಿದ್ದೇವೆ. ನಮ್ಮ ಮದುವೆ ಎಷ್ಟು ಸರಳವಾಗಿ ನಡೆಯಿತೋ, ಅಷ್ಟೇ ನಿಷ್ಠೆ, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಮುಂದಿನ ಬದುಕನ್ನು ಕಟ್ಟಿಕೊಳ್ಳುತ್ತೇವೆ’ ಎಂದು ನವದಂಪತಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಮಂತ್ರಮಾಂಗಲ್ಯ ಪದ್ಧತಿಯಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಎಲ್ಲರಿಗೂ ವೈಯಕ್ತಿಕವಾಗಿ ವಿವಾಹದ ವಿಷಯ ತಿಳಿಸಲು ಸಾಧ್ಯವಾಗಿಲ್ಲ. ದೂರವಾಣಿ ಕರೆ ಹಾಗೂ ಸಂದೇಶಗಳ ಮೂಲಕ ಶುಭ ಹಾರೈಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಅವರು, ಎಲ್ಲಿದ್ದರೂ ಮನಸಾರೆ ಹರಸಿದರೆ ಅದೇ ತಮಗೆ ದೊಡ್ಡ ಶ್ರೀರಕ್ಷೆ ಎಂದು ಹೇಳಿದ್ದಾರೆ.





















