SK Home Ad
Home ಸುದ್ದಿ ದೇಶ 11 ಸಾವಿರ ವೋಲ್ಟ್ ತಂತಿ ತಗುಲಿ 8 ಕಾರ್ಮಿಕರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ!

11 ಸಾವಿರ ವೋಲ್ಟ್ ತಂತಿ ತಗುಲಿ 8 ಕಾರ್ಮಿಕರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ!

0
61

ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಭೀಕರ ವಿದ್ಯುತ್ ದುರಂತ ಸಂಭವಿಸಿದ್ದು, ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಎಂಟು ಮಂದಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಇತರ ಮೂವರು ಕಾರ್ಮಿಕರು ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸೋಮವಾರ ಉದಯಪುರವಾಟಿ ಪೊಲೀಸ್ ಠಾಣಾ ವ್ಯಾಪ್ತಿಯ ಛಪೋಲಿ ಗ್ರಾಮದ ಕದಮ್ ಕುಂಡ್ ರಸ್ತೆ ಕಾಮಗಾರಿ ವೇಳೆ ಈ ದುರಂತ ನಡೆದಿದೆ.

ರಸ್ತೆಗೆ ಜಲ್ಲಿಕಲ್ಲು ಮತ್ತು ಡಾಂಬರು ಮಿಶ್ರಣ ಮಾಡುವ ಭಾರಿ ಗಾತ್ರದ ಮಿಕ್ಸರ್ ಯಂತ್ರವನ್ನು ಬಳಸುತ್ತಿದ್ದ ವೇಳೆ, ರಸ್ತೆಯ ಮೇಲ್ಭಾಗದಲ್ಲೇ ಹಾದುಹೋಗಿದ್ದ 11,000 ವೋಲ್ಟ್ ಸಾಮರ್ಥ್ಯದ ಹೈಟೆನ್ಷನ್ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ಯಂತ್ರದ ಮೇಲ್ಭಾಗ ತಾಗಿದೆ.

ಪರಿಣಾಮ ಕ್ಷಣಾರ್ಧದಲ್ಲೇ ಇಡೀ ಯಂತ್ರಕ್ಕೆ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸಿದ್ದು, ಯಂತ್ರದ ಬಳಿ ಹಾಗೂ ಸುತ್ತಮುತ್ತ ಕೆಲಸ ಮಾಡುತ್ತಿದ್ದ ಕಾರ್ಮಿಕರು ವಿದ್ಯುತ್ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಮಗಾರಿ ಸ್ಥಳದಲ್ಲಿ ಕನಿಷ್ಠ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ವಹಿಸದ ಗುತ್ತಿಗೆದಾರರ ನಿರ್ಲಕ್ಷ್ಯವೇ ಜೀವಹಾನಿಗೆ ಕಾರಣ ಎಂದು ಆರೋಪಿಸಿದ್ದಾರೆ.

ದುರಂತಕ್ಕೆ ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ಗಾಯಾಳುಗಳಿಗೆ ಅತ್ಯುನ್ನತ ಚಿಕಿತ್ಸೆ ನೀಡುವಂತೆ ಆದೇಶಿಸಿ ತನಿಖೆಗೆ ನಿರ್ದೇಶನ ನೀಡಿದ್ದಾರೆ. ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಕೂಡ ಸಂತಾಪ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ತುರ್ತಾಗಿ ನ್ಯಾಯಯುತ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.