SK Home Ad
Home ಸಿನಿ ಮಿಲ್ಸ್ ಕನ್ನಡ ರಾಜ್ಯೋತ್ಸವದ ಸಂಭ್ರಮ: ಕ್ರೀಡಾಂಗಣದಲ್ಲಿ ರಾರಾಜಿಸಿದ ಕನ್ನಡ ಧ್ವಜ, ಪ್ರಿಯಾ ಸುದೀಪ್ ಕನ್ನಡಾಭಿಮಾನ!

ಕನ್ನಡ ರಾಜ್ಯೋತ್ಸವದ ಸಂಭ್ರಮ: ಕ್ರೀಡಾಂಗಣದಲ್ಲಿ ರಾರಾಜಿಸಿದ ಕನ್ನಡ ಧ್ವಜ, ಪ್ರಿಯಾ ಸುದೀಪ್ ಕನ್ನಡಾಭಿಮಾನ!

0
28

ಬೆಂಗಳೂರು: ಹಾಗೂ ನೋಯ್ಡಾದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ ಕನ್ನಡಿಗರ ಕೀರ್ತಿ ಪತಾಕೆ ಹಾರಿದೆ. ಇಂಡಿಯನ್ ರೇಸಿಂಗ್ ಲೀಗ್ (ಐಆರ್‌ಎಲ್) ಸ್ಪರ್ಧೆಯಲ್ಲಿ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡವು ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ಕ್ರೀಡಾ ಸಾಧನೆಯು ಕೇವಲ ಗೆಲುವಿಗೆ ಸೀಮಿತವಾಗದೆ, ಕನ್ನಡ ನಾಡು ಮತ್ತು ಅಸ್ಮಿತೆಯ ಗರ್ವದ ಕ್ಷಣವಾಗಿ ರೂಪುಗೊಂಡಿತು.

ನೋಯ್ಡಾದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಗೌತಮ್ ಬುದ್ಧ ನಗರದ ಪೊಲೀಸ್ ಕಮಿಷನರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತರಿಗೆ ಟ್ರೋಫಿ ಪ್ರದಾನ ಮಾಡಿದರು. ಈ ವೇಳೆ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಮಾಲಕಿ ಪ್ರಿಯಾ ಸುದೀಪ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ತೋರಿದ ಕನ್ನಡಾಭಿಮಾನ ಎಲ್ಲರ ಗಮನ ಸೆಳೆಯಿತು. ಗೆಲುವಿನ ಸಂಭ್ರಮದಲ್ಲಿ ಪ್ರಿಯಾ ಸುದೀಪ್ ಅವರು ಕನ್ನಡದ ಬಾವುಟದ ಕೆಂಪು ಮತ್ತು ಹಳದಿ ಬಣ್ಣದ ಶಾಲನ್ನು ಅತಿಥಿಗಳಿಗೆ ನೀಡಿ, ವಿಜೇತರಿಗೆ ಗೌರವಪೂರ್ವಕವಾಗಿ ಹೊದಿಸುವಂತೆ ಕೋರಿದರು.

ಜೊತೆಗೆ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ನಾಡಿನ ಅಸ್ಮಿತೆಯನ್ನು ಹೆಮ್ಮೆಯಿಂದ ಆಚರಿಸುವ ‘ಕರ್ನಾಟಕ ರಾಜ್ಯೋತ್ಸವ’ದ ಮಹತ್ವವನ್ನು ವೇದಿಕೆಯಲ್ಲಿ ಪ್ರಸ್ತಾಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪ್ರಶಸ್ತಿ ಸ್ವೀಕರಿಸಿದ ವಿಜೇತ ರುಹಾನ್ ಆಳ್ವಾ ಅವರು ತಮ್ಮ ಹೆಗಲ ಮೇಲೆ ಕನ್ನಡ ಧ್ವಜದ ಬಣ್ಣದ ಶಾಲನ್ನು ಹೊದ್ದು ನಿಂತ ದೃಶ್ಯವು, ಕನ್ನಡಿಗರು ಎಲ್ಲೇ ಇದ್ದರೂ ತಾಯ್ನಾಡಿನ ಹೆಮ್ಮೆಯನ್ನು ಸದಾ ಜೀವಂತವಾಗಿರಿಸಿಕೊಳ್ಳುತ್ತಾರೆ ಎಂಬುದನ್ನು ಸಾಬೀತುಪಡಿಸಿತು. ಪ್ರಿಯಾ ಸುದೀಪ್ ಅವರ ಈ ನಡೆ ಕ್ರೀಡಾ ವಿಜಯವನ್ನು ಕನ್ನಡದ ಸಾರ್ವಭೌಮತೆಯ ಸಂಭ್ರಮವನ್ನಾಗಿ ಪರಿವರ್ತಿಸಿತು.