ಅಗರ್ತಲ: ಸರ್ಕಾರದ `ಸ್ಮಾರ್ಟ್ ಬಾರ್ಡರ್’ ಯೋಜನೆ ಅಂತಿಮ ಹಂತದಲ್ಲಿದ್ದು ನವೀನ ತಂತ್ರಜ್ಞಾನ ದೊಂದಿಗೆ ಹೊಸ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ಬಾಂಗ್ಲಾ ಗಡಿಯಲ್ಲಿನ ತ್ರಿಪುರಾದ ಲಂಕಾಮುರ ಗಡಿ ಠಾಣೆ ಬಳಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯನ್ನು ಉದ್ದೇಶಿಸಿ ಅವರು ಮಾತನಾಡಿ, ಗಡಿ ಭದ್ರತಾ ಪಡೆ ಸಿಬ್ಬಂದಿಯನ್ನು ಎಲ್ಲೆಲ್ಲಿ ನಿಯೋಜಿಸಲಾಗಿದೆಯೋ ಅಲ್ಲೆಲ್ಲಾ ಸ್ಮಾರ್ಟ್ ಬಾರ್ಡರ್‌ಗಳನ್ನು ನಿರ್ಮಿಸಲಾಗುವುದು. ಇದು ಅತ್ಯಾಧುನಿಕ ತಂತ್ರಜ್ಞಾನ, ಸ್ಥಳೀಯ ಆಡಳಿತ ಮತ್ತು ಗಡಿ ಕಾವಲುಗಾರ ವ್ಯವಸ್ಥೆಯನ್ನೂ ಒಳಗೊಂಡಿರುತ್ತದೆ ಎಂದು ವಿವರಿಸಿದರು.
ಪೈಲಟ್ ಯೋಜನೆ ಅನ್ವಯ ದೇಶದ 7 ರಿಂದ 8 ಸ್ಥಳಗಳಲ್ಲಿ ಈ ನವೀನ ಮಾದರಿಯ ಸ್ಮಾರ್ಟ್ ಬಾರ್ಡರ್ ಪರಿಕಲ್ಪನೆಯ ವ್ಯವಸ್ಥೆ ಜಾರಿಗೊಳಿಸಲಾಗುವುದು. ಅದರಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ ಮುಖ್ಯ. ಹೀಗಾಗಿ ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಬಿಎಸ್‌ಎಫ್ ಮಹಾ ನಿರ್ದೇಶಕರು ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಬೇಕು ಎಂದು ಶಾ ಆಹ್ವಾನಿಸಿದರು.
ಪ್ರತಿ ಗಡಿಯೂ ತನ್ನದೇ ಆದ ಸವಾಲುಗಳನ್ನು ಹೊಂದಿರುತ್ತವೆ. ಈ ಎಲ್ಲ ಸವಾಲುಗಳನ್ನು ನಮ್ಮ ಬಿಎಸ್‌ಎಫ್ ಪಡೆಯವರು ಸಮರ್ಥ ವಾಗಿ ನಿಭಾಯಿಸುತ್ತಿದ್ದಾರೆ ಎಂದು ಶಾ ಮೆಚ್ಚುಗೆ ವ್ಯಕ್ತಪಡಿಸಿದರು.





















