ನವದೆಹಲಿ: ವಿಮಾನದೊಳಗಿಂದಲೇ ವಶಕ್ಕೆ ಪಡೆದು, ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದ್ದ ಕಾಕ್‌ರೋಚ್ ಜನತಾ ಪಾರ್ಟಿ (CJP)ಯ ಮೂವರು ಸದಸ್ಯರನ್ನು ಸ್ಥಳೀಯ ನ್ಯಾಯಾಲಯ ಬಿಡುಗಡೆ ಮಾಡಿದೆ. ಅಭಿಜೀತ್ ದಿಪ್ಕೆ, ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರಿಗೆ ಒಂದು ವರ್ಷದ ಅವಧಿಯಲ್ಲಿ ಶಾಂತಿ ಕಾಪಾಡಿಕೊಂಡು ಉತ್ತಮ ನಡವಳಿಕೆ ತೋರುವ ಷರತ್ತಿನೊಂದಿಗೆ ಬಿಡುಗಡೆ ಭಾಗ್ಯ ದೊರೆತಿದೆ.
ಶನಿವಾರ (ಅ.10) ದೆಹಲಿಗೆ ಬಂದಿಳಿದ ವಿಮಾನದಿಂದಲೇ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಮುಂಜಾಗ್ರತಾ ಕ್ರಮದ ಭಾಗವಾಗಿ ಬಂಧಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಅವರನ್ನು ದೆಹಲಿ ಕ್ಯಾಂಟ್‌ನ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಮೂವರು ನಾಯಕರಿಗೆ ತಲಾ ₹50 ಸಾವಿರ ಮೊತ್ತದ ಜಾಮೀನು ಬಾಂಡ್ ಹಾಗೂ ಭದ್ರತಾ ಬಾಂಡ್ ಸಲ್ಲಿಸುವಂತೆ ನ್ಯಾಯಾಲಯ ಷರತ್ತು ವಿಧಿಸಿತು. ಮುಂದಿನ ಒಂದು ವರ್ಷದ ಅವಧಿಯಲ್ಲಿ ಶಾಂತಿಭಂಗ ಉಂಟುಮಾಡುವ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗಬಾರದು ಮತ್ತು ಉತ್ತಮ ನಡವಳಿಕೆ ಕಾಪಾಡಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸರಿಂದ ಮಾಹಿತಿ: ಮೂವರ ಬಂಧನ ಹಾಗೂ ನ್ಯಾಯಾಲಯದ ಪ್ರಕ್ರಿಯೆ ಕುರಿತು ದೆಹಲಿ ಪೊಲೀಸರು ಸಾಮಾಜಿಕ ಮಾಧ್ಯಮ ʻಎಕ್ಸ್ʼನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ 10ರಂದು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದ್ದ ನಾಯಕರನ್ನು ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿ ಭಾನುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.






















