ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ವಿಪಕ್ಷಗಳ ನಾಲ್ವರು ಮಾಜಿ ಮುಖ್ಯಮಂತ್ರಿಗಳನ್ನು ಪೊಲೀಸರು ದಿಢೀರ್ ವಶಕ್ಕೆ ಪಡೆದಿದ್ದಾರೆ.
ಜಂತರ್ ಮಂತರ್ ಚಲೋಗೆ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯತ್ನಿಸಿದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಹಾಗೂ ತ್ರಿಪುರದ ಮಾಜಿ ಸಿಎಂ ಮಾಣಿಕ್ ಸರ್ಕಾರ್ ಅವರನ್ನು ಪೊಲೀಸರು ರಸ್ತೆಯಲ್ಲೇ ಅಡ್ಡಗಟ್ಟಿ ವಶಕ್ಕೆ ಪಡೆದಿದ್ದಾರೆ.
ಸೆಂಟ್ರಲ್ ದೆಹಲಿಯ ಸೌತ್ ಅವೆನ್ಯೂ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಾಗ, ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಸಂಸದರಾದ ಡೆರೆಕ್ ಒಬ್ರಿಯಾನ್ ಹಾಗೂ ಡೋಲಾ ಸೇನ್ ಜೊತೆ ಬಸ್ ನಿಲ್ದಾಣದಲ್ಲೇ ಕುಳಿತು ವಿಶಿಷ್ಟ ಪ್ರತಿಭಟನೆ ನಡೆಸಿದರು. ಬಾಯಿಗೆ ಬ್ಯಾಂಡ್-ಏಡ್ ಅಂಟಿಸಿಕೊಂಡು ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ನಡೆಸುತ್ತಿದ್ದ ಮಮತಾ ಅವರನ್ನು ಪೊಲೀಸರು ಬಲವಂತವಾಗಿ ಬಸ್ಸಿಗೆ ಹತ್ತಿಸಿ ಕರೆದೊಯ್ದರು.
ಪೊಲೀಸ್ ವಾಹನದಿಂದಲೇ ವಿಡಿಯೋ ಬಿಡುಗಡೆ ಮಾಡಿದ ಮಮತಾ, “ಸರ್ಕಾರ ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದೆ; ಜನರ ಧ್ವನಿಗಾಗಿ ಇಂಡಿಯಾ ಒಕ್ಕೂಟ ನಿರಂತರವಾಗಿ ಹೋರಾಡಲಿದೆ” ಎಂದು ಆಕ್ರೋಶ ಹೊರಹಾಕಿದರು.
ಮತ್ತೊಂದೆಡೆ, ಬೆಳಗ್ಗೆಯಿಂದಲೇ ಮನೆ ಸುತ್ತುವರಿದಿದ್ದ ಪೊಲೀಸರು, ಹೊರಬರಲು ಯತ್ನಿಸಿದ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದರು. ದೇಶದ ಯುವಕರು ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ, ‘ವೋಟ್ ಚೋರಿ’ ವಿರುದ್ಧ ಎಲ್ಲರೂ ಒಗ್ಗೂಡಬೇಕು ಎಂದು ಕೇಜ್ರಿವಾಲ್ ಕರೆ ನೀಡಿದರು. ಪಿಣರಾಯಿ ವಿಜಯನ್, ಸಂಸದ ಜಾನ್ ಬ್ರಿಟ್ಟಾಸ್ ಮತ್ತು ಮಾಣಿಕ್ ಸರ್ಕಾರ್ ಅವರನ್ನು ಛತ್ರಸಾಲ್ ಕ್ರೀಡಾಂಗಣದ ತಾತ್ಕಾಲಿಕ ಬಂಧನ ಕೇಂದ್ರಕ್ಕೆ ರವಾನಿಸಲಾಗಿದೆ.
ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಮತ್ತು ಕಳೆದ ಎರಡು ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದ ನಿಯೋಗವು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು.
ಸೋಮವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದು, ಸೋಮವಾರ ದೇಶವ್ಯಾಪಿ ಬೃಹತ್ ಪ್ರತಿಭಟನೆಗೆ ಇಂಡಿಯಾ ಮೈತ್ರಿಕೂಟ ಕರೆ ನೀಡಿದೆ.



















