SK Home Ad
Home ಸುದ್ದಿ ದೇಶ ದೆಹಲಿ: 45 ಮೆಟ್ರೋ ನಿಲ್ದಾಣಗಳ ನಿರ್ಬಂಧ ರಾತ್ರಿ 10ರವರೆಗೆ ವಿಸ್ತರಣೆ

ದೆಹಲಿ: 45 ಮೆಟ್ರೋ ನಿಲ್ದಾಣಗಳ ನಿರ್ಬಂಧ ರಾತ್ರಿ 10ರವರೆಗೆ ವಿಸ್ತರಣೆ

0
58
ದೆಹಲಿಯಲ್ಲಿ ಪ್ರತಿಭಟನೆ ಹಿನ್ನೆಲೆ ಮೆಟ್ರೋ ನಿರ್ಬಂಧ; ರಾತ್ರಿ 10ರವರೆಗೆ ಮುಂದುವರಿಕೆ

ನವದೆಹಲಿ: ಭದ್ರತಾ ಕಾರಣಗಳಿಂದ ಶುಕ್ರವಾರ ರಾತ್ರಿ 9 ಗಂಟೆಯಿಂದ ಮುಚ್ಚಲಾಗಿದ್ದ ದೆಹಲಿ ಮೆಟ್ರೋದ 45 ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ನಿರ್ಬಂಧವನ್ನು ಶನಿವಾರ (ಅಕ್ಟೋಬರ್ 10) ರಾತ್ರಿ 10 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ನಿಗಮ (DMRC) ತಿಳಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲಾಗಿದ್ದು, ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಮೊದಲು 57 ಮೆಟ್ರೋ ನಿಲ್ದಾಣಗಳಲ್ಲಿ ನಿರ್ಬಂಧ ವಿಧಿಸಲು ನಿರ್ಧರಿಸಲಾಗಿತ್ತು. ಬಳಿಕ ಪರಿಷ್ಕೃತ ಸೂಚನೆಯಂತೆ ಈ ಸಂಖ್ಯೆಯನ್ನು 45ಕ್ಕೆ ಇಳಿಸಲಾಯಿತು. ರಾಜೀವ್ ಚೌಕ್, ಕಾಶ್ಮೀರ್ ಗೇಟ್, ಸೆಂಟ್ರಲ್ ಸೆಕ್ರೆಟರಿಯಟ್, ನವದೆಹಲಿ, ಐಟಿಒ, ಖಾನ್ ಮಾರ್ಕೆಟ್, ಹೌಜ್ ಖಾಸ್, ಲಜಪತ್ ನಗರ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳು ಈ ಪಟ್ಟಿಯಲ್ಲಿವೆ.

DMRC ಪ್ರಕಟಿಸಿದ ಸೂಚನೆಯ ಪ್ರಕಾರ, ಭದ್ರತಾ ಸಂಸ್ಥೆಗಳು ಪರಿಸ್ಥಿತಿಯನ್ನು ಪರಿಶೀಲಿಸಲಿದ್ದು, ಅಗತ್ಯವಿದ್ದರೆ ಮುಂದಿನ ಸೂಚನೆಗಳನ್ನು ನೀಡಲಿವೆ. ರಾತ್ರಿ 10 ಗಂಟೆಯ ನಂತರ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ಪುನರಾರಂಭದ ಕುರಿತು ಖಚಿತ ಮಾಹಿತಿ ಪಡೆಯಲು ಪ್ರಯಾಣಿಕರು ಅಧಿಕೃತ ಪ್ರಕಟಣೆಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿದೆ.

ಪ್ರಯಾಣಿಕರು ಮೆಟ್ರೋ ಪ್ರಯಾಣ ಆರಂಭಿಸುವ ಮೊದಲು ತಮ್ಮ ಮಾರ್ಗ ಮತ್ತು ನಿಲ್ದಾಣದ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯವಿದ್ದರೆ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.