SK Home Ad
Home ಸುದ್ದಿ ದೇಶ ರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ನೃತ್ಯಗೋಪಾಲ್ ದಾಸ್ ಆಸ್ಪತ್ರೆಗೆ ದಾಖಲು

ರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ನೃತ್ಯಗೋಪಾಲ್ ದಾಸ್ ಆಸ್ಪತ್ರೆಗೆ ದಾಖಲು

0
76

ಲಖನೌ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ, 89 ವರ್ಷದ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಮೂತ್ರನಾಳದ ಸೋಂಕು ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೆದಾಂತಾ ಆಸ್ಪತ್ರೆ ಬುಧವಾರ ಬಿಡುಗಡೆ ಮಾಡಿದ ವೈದ್ಯಕೀಯ ಬುಲೆಟಿನ್ ಪ್ರಕಾರ, ಜೂನ್ 29ರಂದು ಮಧ್ಯಾಹ್ನ ಸುಮಾರು 1.30ಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. ಪ್ರಾಥಮಿಕ ಪರೀಕ್ಷೆಯ ಬಳಿಕ ಅವರಿಗೆ ಮೂತ್ರನಾಳದ ಸೋಂಕು ಇರುವುದು ದೃಢಪಟ್ಟಿದೆ.

ಪ್ರಸ್ತುತ ಅವರು ಐಸಿಯುನಲ್ಲಿ ದಾಖಲಾಗಿದ್ದು, ತೀವ್ರ ನಿಗಾ ತಜ್ಞ ಡಾ. ದಿಲೀಪ್ ಹಾಗೂ ಅವರ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವಿವಿಧ ತಜ್ಞ ವೈದ್ಯರ ತಂಡವು ಅವರ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಿದ್ದು, ಅಗತ್ಯ ಚಿಕಿತ್ಸೆಯನ್ನು ನೀಡುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮಮಂದಿರ ನಿರ್ಮಾಣ ಮತ್ತು ನಿರ್ವಹಣೆಯ ಹೊಣೆ ಹೊತ್ತಿರುವ ಸಂಸ್ಥೆಯಾಗಿದ್ದು, ನೃತ್ಯ ಗೋಪಾಲ್ ದಾಸ್ ಅದರ ಅಧ್ಯಕ್ಷರಾಗಿದ್ದಾರೆ.

ಜುಲೈ 6ರಂದು ಟ್ರಸ್ಟ್‌ನ ಮಹತ್ವದ ಸಭೆ ನಡೆಯಲಿದ್ದು, ರಾಮಮಂದಿರದಲ್ಲಿ ಕಾಣಿಕೆ ಹಣದ ವಿವಾದದ ಬಳಿಕ ಟ್ರಸ್ಟಿಗಳಾದ ಚಂಪತ್ ರೈ ಹಾಗೂ ಅನಿಲ್ ಮಿಶ್ರಾ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಈ ಸಭೆಗೆ ವಿಶೇಷ ಮಹತ್ವ ಬಂದಿದೆ.

ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣದಿಂದ ಇತ್ತೀಚಿನ ಕೆಲವು ಸಭೆಗಳಲ್ಲಿ ನೃತ್ಯ ಗೋಪಾಲ್ ದಾಸ್ ಅವರು ವರ್ಚುವಲ್ ಮೂಲಕ ಭಾಗವಹಿಸಿದ್ದರು. ಆದರೆ ಈಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜುಲೈ 6ರ ಸಭೆಯಲ್ಲಿ ಅವರು ಭಾಗವಹಿಸುವ ಸಾಧ್ಯತೆ ಅನುಮಾನಾಸ್ಪದವಾಗಿದೆ ಎಂದು ಮೂಲಗಳು ತಿಳಿಸಿವೆ.