ಕಸಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು NOTTO ಮಹತ್ವದ ಆದೇಶ : ಫಲಿತಾಂಶದ ದತ್ತಾಂಶ ಪ್ರಕಟಣೆ ಕಡ್ಡಾಯ – NOTTO ಮಹತ್ವದ ಆದೇಶ
ನವದೆಹಲಿ: ದೇಶದಲ್ಲಿ ಮೂತ್ರಪಿಂಡ ಸೇರಿದಂತೆ ವಿವಿಧ ಅಂಗಾಂಗ ಕಸಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಹಾಗೂ ಆಸ್ಪತ್ರೆಗಳ ಹೊಣೆಗಾರಿಕೆಯನ್ನು ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಮಹತ್ವದ ಆದೇಶ ಹೊರಡಿಸಿದೆ. ದೇಶದ ಎಲ್ಲಾ ನೋಂದಾಯಿತ ಅಂಗಾಂಗ ಕಸಿ ಆಸ್ಪತ್ರೆಗಳು ತಮ್ಮ ವೆಬ್‌ಸೈಟ್‌ಗಳ ಮುಖಪುಟದಲ್ಲಿಯೇ ಕಸಿ ಪ್ರಕ್ರಿಯೆಯ ಫಲಿತಾಂಶಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಸಂಸ್ಥೆ ಸೂಚಿಸಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ NOTTO ನಿರ್ದೇಶಕ ಡಾ. ಅನಿಲ್ ಕುಮಾರ್ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮಂಗಳೂರಿನ ಆರೋಗ್ಯ ತಜ್ಞರಾದ ಶ್ಯಾಮ್ ಕಾಮತ್ ಮತ್ತು ಡಾ. ಲಿಯೋನೆಲ್ ಡಿಸೋಜಾ ಸಲ್ಲಿಸಿದ್ದ ಸಮಗ್ರ ವರದಿಯ ಆಧಾರದ ಮೇಲೆ ಸಂಸದರು ಈ ವಿಷಯವನ್ನು ಕೇಂದ್ರದ ಗಮನಕ್ಕೆ ತಂದಿದ್ದರು.
ಪ್ರಸ್ತುತ ದೇಶಾದ್ಯಂತ 824 ಕಸಿ ಕೇಂದ್ರಗಳು NOTTO ರಾಷ್ಟ್ರೀಯ ನೋಂದಣಿಗೆ ಸಂಪರ್ಕ ಹೊಂದಿವೆ. ಹೊಸ ಮಾರ್ಗಸೂಚಿಯಂತೆ, ಪ್ರತಿ ಆಸ್ಪತ್ರೆಯೂ ತಾವು ನಡೆಸಿದ ಅಂಗಾಂಗ ಕಸಿ ಚಿಕಿತ್ಸೆಗಳ ಫಲಿತಾಂಶಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕಾಗಿದೆ. ರೋಗಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ 6 ತಿಂಗಳು, 1 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಯಲ್ಲಿ ಎಷ್ಟು ಮಂದಿ ಬದುಕುಳಿದಿದ್ದಾರೆ, ಎಷ್ಟು ಮಂದಿ ಮೃತಪಟ್ಟಿದ್ದಾರೆ ಹಾಗೂ ಎಷ್ಟು ಕಸಿಗಳು ವಿಫಲವಾಗಿವೆ ಎಂಬ ಮಾಹಿತಿಯನ್ನು ದಾಖಲಿಸುವುದು ಕಡ್ಡಾಯವಾಗಿದೆ.
ಇದಲ್ಲದೆ, ಕಸಿ ಪ್ರಕ್ರಿಯೆಗೂ ಮುನ್ನ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಚಿಕಿತ್ಸೆ ಸಂಬಂಧಿತ ಅಪಾಯಗಳು, ಸಾಧ್ಯ ಫಲಿತಾಂಶಗಳು ಮತ್ತು ದೀರ್ಘಾವಧಿಯ ಪರಿಣಾಮಗಳ ಕುರಿತು ಸಂಪೂರ್ಣ ಮಾಹಿತಿ ನೀಡುವುದನ್ನೂ ಕಡ್ಡಾಯಗೊಳಿಸಲಾಗಿದೆ.
ಸಂಸದ ಬ್ರಿಜೇಶ್ ಚೌಟ ಪ್ರತಿಕ್ರಿಯಿಸಿ, ಆಸ್ಪತ್ರೆಗಳ ಪಾರದರ್ಶಕತೆ ಹಾಗೂ ರೋಗಿಗಳ ತಿಳುವಳಿಕೆಯುಳ್ಳ ನಿರ್ಧಾರಗಳಿಗೆ ಇದು ಮಹತ್ವದ ಹೆಜ್ಜೆಯಾಗಿದ್ದು, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಲ್ಲಿ ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಳ್ಳುತ್ತಿರುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.





















