ದಾವಣಗೆರೆ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ (ಪೋಕ್ಸೋ) ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಪದಚ್ಯುತ ಪೀಠಾಧ್ಯಕ್ಷ ಶ್ರೀವಚನಾನಂದ ಸ್ವಾಮೀಜಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ರೆಗ್ಯುಲರ್ ಬೇಲ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಶ್ರೀವಚನಾನಂದ ಸ್ವಾಮೀಜಿ ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುವ ಮುನ್ನವೇ ಅವರು ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದರೆ, ಈ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸುವಂತೆ ಸಂತ್ರಸ್ತ ಬಾಲಕನ ತಾಯಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: TET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಪರೀಕ್ಷೆ ಮುಂದೂಡಿಕೆ!
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದ ವಿವಿಧ ಅಂಶಗಳನ್ನು ಪರಿಶೀಲಿಸಿದ ಬಳಿಕ ಶ್ರೀವಚನಾನಂದ ಸ್ವಾಮೀಜಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿತ್ತು. ಜೊತೆಗೆ, ರೆಗ್ಯುಲರ್ ಬೇಲ್‌ಗೆ ಅರ್ಜಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶವನ್ನು ನ್ಯಾಯಾಲಯ ನೀಡಿತ್ತು.
ಹೈಕೋರ್ಟ್ ಆದೇಶದಂತೆ, ಶನಿವಾರ ತಮ್ಮ ಪರ ವಕೀಲ ಎಸ್.ವಿ. ಪಾಟೀಲ್ ಹಾಗೂ ಬೆಂಬಲಿಗರೊಂದಿಗೆ ಶ್ರೀವಚನಾನಂದ ಸ್ವಾಮೀಜಿ ದಾವಣಗೆರೆಯ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ನಿಯಮಿತ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು.
ಇದನ್ನೂ ಓದಿ: ಸಂಸದ ಬ್ರಿಜೇಶ್ ಚೌಟ ಪತ್ರಕ್ಕೆ ಸ್ಪಂದಿಸಿದ ಕೇಂದ್ರ: ಅಂಗಾಂಗ ಕಸಿ ಕ್ಷೇತ್ರದಲ್ಲಿ ಹೊಸ ನಿಯಮ ಜಾರಿ
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಮುಂದಿನ ಕಾನೂನು ಪ್ರಕ್ರಿಯೆ ನಡೆಯಲಿದೆ.



















