Home Advertisement
Home ಸುದ್ದಿ ದೇಶ ಮಿರ್ಜಾಪುರ ಭೀಕರ ರಸ್ತೆ ಅಪಘಾತ: ನಾಲ್ವರು ಮಕ್ಕಳೂ ಸೇರಿ 11 ಸಾವು

ಮಿರ್ಜಾಪುರ ಭೀಕರ ರಸ್ತೆ ಅಪಘಾತ: ನಾಲ್ವರು ಮಕ್ಕಳೂ ಸೇರಿ 11 ಸಾವು

0
85

ಲಖ್ನೌ/ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಡ್ರಾಮಂಡ್‌ಗಂಜ್ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 11 ಮಂದಿ ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ. ಬೆಟ್ಟದ ಕಡಿದಾದ ರಸ್ತೆಯಲ್ಲಿ ಟ್ರಕ್ ನಿಯಂತ್ರಣ ತಪ್ಪಿ ಕಾರು, ಎಸ್‌ಯುವಿ ಹಾಗೂ ಟ್ರೇಲರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

ಮಿರ್ಜಾಪುರ ಪೊಲೀಸ್ ವರಿಷ್ಠಾಧಿಕಾರಿ ಅಪರ್ಣಾ ರಜತ್ ಕೌಶಿಕ್ ಮಾಹಿತಿ ನೀಡಿದ್ದು, ಅಪಘಾತದ ನಂತರ ಎಸ್‌ಯುವಿಗೆ ಬೆಂಕಿ ಹೊತ್ತಿಕೊಂಡು ಅದರಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ. ಇನ್ನು ಕಾರು ಮತ್ತು ಟ್ರಕ್ ಚಾಲಕರೂ ಸಾವಿಗೀಡಾಗಿದ್ದಾರೆ. ಉಳಿದ ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.

ಅಪಘಾತದ ಹಿನ್ನೆಲೆ: ಪೊಲೀಸರ ಪ್ರಕಾರ, ಬೆಟ್ಟದಿಂದ ಇಳಿಯುತ್ತಿದ್ದ ಟ್ರಕ್‌ನ ಬ್ರೇಕ್ ವೈಫಲ್ಯಗೊಂಡು ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮವಾಗಿ ಅದು ಮೊದಲು ಎರಡು ಕಾರುಗಳಿಗೆ ಡಿಕ್ಕಿ ಹೊಡೆದು, ನಂತರ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಟ್ರೇಲರ್‌ಗೆ ಢಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ.

ಮೃತರ ವಿವರ : ಮೃತರಲ್ಲಿ ಮಿರ್ಜಾಪುರ ಜಿಲ್ಲೆಯ ಏಳು ಮಂದಿ, ಮಧ್ಯಪ್ರದೇಶದ ಮೂವರು ಮತ್ತು ಸೋನ್‌ಭದ್ರ ಜಿಲ್ಲೆಯ ಒಬ್ಬರು ಸೇರಿದ್ದಾರೆ. ಮಕ್ಕಳೂ ಸೇರಿರುವುದು ಘಟನೆಗೆ ಇನ್ನಷ್ಟು ದುಃಖದ ಛಾಯೆ ಮೂಡಿಸಿದೆ.

ರಕ್ಷಣಾ ಕಾರ್ಯಾಚರಣೆ :ಪೊಲೀಸರು ಮತ್ತು ಸ್ಥಳೀಯರು ಸೇರಿ ಅವಶೇಷಗಳಡಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಧಾನಿಯವರ ಸಂತಾಪ, ಪರಿಹಾರ ಘೋಷಣೆ: ಪ್ರಧಾನಿ ನರೇಂದ್ರ ಮೋದಿ ಈ ದುರಂತದ ಬಗ್ಗೆ ಆಳವಾದ ಸಂತಾಪ ವ್ಯಕ್ತಪಡಿಸಿ, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50,000 ಪರಿಹಾರ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಪ್ರತಿಕ್ರಿಯೆ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿ, ಗಾಯಾಳುಗಳಿಗೆ ತಕ್ಷಣ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯ ಸರ್ಕಾರದಿಂದಲೂ ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ.