SK Home Ad
Home ಸುದ್ದಿ ದೇಶ ಚಲಿಸುವ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ಬೆಂಕಿ ಅವಘಡ: ಬಿ 1 ಕೋಚ್ ಜಖಂ, ತಪ್ಪಿದ...

ಚಲಿಸುವ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ಬೆಂಕಿ ಅವಘಡ: ಬಿ 1 ಕೋಚ್ ಜಖಂ, ತಪ್ಪಿದ ಭಾರಿ ದುರಂತ!

0
245

ನವದೆಹಲಿ: ತಿರುವನಂತಪುರಂನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಪ್ರಮುಖ ಎಕ್ಸ್‌ಪ್ರೆಸ್ ರೈಲೊಂದರಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ವರದಿಯಾಗಿದೆ. ರೈಲು ಸಂಖ್ಯೆ 12431 ತಿರುವನಂತಪುರಂ – ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ಹಳಿಯಲ್ಲಿ ಚಲಿಸುತ್ತಿದ್ದಾಗಲೇ ಈ ಅವಘಡ ಸಂಭವಿಸಿದೆ. ರೈಲಿನ ಬಿ 1 (B1) ಕೋಚ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ತೀವ್ರ ಭೀತಿಗೊಳಗಾಗಿದ್ದಾರೆ.

ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ, ಕೋಟಾ ರೈಲ್ವೆ ವಿಭಾಗದ ವ್ಯಾಪ್ತಿಗೆ ಬರುವ ವಿಕ್ರಮ್‌ಗಢ ಅಲೋಟ್ ಮತ್ತು ಲುನಿರಿಚಾ ನಿಲ್ದಾಣಗಳ ನಡುವೆ ರೈಲು ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಲರ್ಟ್ ಆದ ರೈಲ್ವೆ ಸಿಬ್ಬಂದಿ ಮತ್ತು ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ನಂತರ ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಜೀವಹಾನಿ ಇಲ್ಲ: ಈ ಭೀಕರ ಅವಘಡದಲ್ಲಿ ಯಾವುದೇ ಜೀವಹಾನಿ ಅಥವಾ ಯಾರಿಗೂ ಗಂಭೀರ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಸಕಾಲದಲ್ಲಿ ಬೆಂಕಿ ನಂದಿಸಿದ್ದರಿಂದ ರೈಲಿನಲ್ಲಿದ್ದ ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈಲಿಗೆ ಬೆಂಕಿ ತಗುಲಲು ನಿಖರವಾದ ಕಾರಣವೇನೆಂಬುದು ಪ್ರಸ್ತುತ ತಿಳಿದುಬಂದಿಲ್ಲವಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರತ್ಲಂನಿಂದ ವಿಶೇಷ ಅಪಘಾತ ಪರಿಹಾರ ರೈಲು (Accident Relief Train) ತಕ್ಷಣವೇ ಸ್ಥಳಕ್ಕೆ ರವಾನೆಯಾಗಿದೆ. ಇದರೊಂದಿಗೆ ರತ್ಲಂ ವಿಭಾಗದ ಡಿಆರ್‌ಎಂ (DRM) ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳ ತಂಡವು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.