ವಿಶಾಖಪಟ್ಟಣ: ಉಕ್ಕು ಸ್ಥಾವರದಲ್ಲಿ ಕರಗಿದ ಲೋಹ ಹರಿದು ಸುಮಾರು 8 ಜನ ಕಾರ್ಮಿಕರು ಮೃತಪಟ್ಟ ಘಟನೆ ಆಂಧ್ರ ಪ್ರದೇಶದ ಅನಕಪಲ್ಲಿ ಜಿಲ್ಲೆಯ ವಿಶಾಖಪಟ್ಟಣಂದಲ್ಲಿ ನಡೆದಿದೆ.
ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಸದ್ಯ ನಾಲ್ಕು ಜನರ ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿದವರಿಗಾಗಿ ಶೋಧ ಕಾರ್ಯವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ್ದಾರೆ.
ದೊಡ್ಡ ಗಾತ್ರದ ಬಕೆಟ್ ಉರುಳಿ ಬಿದ್ದ ಪರಿಣಾಮ ಕಾರ್ಮಿಕರ ಮೇಲೆ ಭಾರೀ ಪ್ರಮಾಣದ ಕರಗಿದ ಲೋಹ ಹರಿದು ಬಂದಿದೆ. ಇದರಿಂದಾಗಿ ಉಕ್ಕಿನ ಕರಗುವ ಕೇಂದ್ರ ಸಂಖ್ಯೆ 1 ರಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ.
ಆದರೆ, ಕರಗಿದ ಉಕ್ಕು ತುಂಬಿದ್ದ ಬಕೆಟ್ ಉರುಳಿ ಬೀಳುವ ಮುನ್ನ ಸ್ಫೋಟವೊಂದು ಸಂಭವಿಸಿದೆ ಎಂದು ಅಲ್ಲಿಯೇ ಹತ್ತಿರದಲ್ಲಿದ್ದ ಸುರಕ್ಷಿತ ಕಾರ್ಮಿಕರು ತಿಳಿಸಿದ್ದಾರೆ. ಘಟನೆ ನಿಖರ ಕಾರಣ ಏನು ಎನ್ನುವುದು ತನಿಖೆಯಿಂದಲೇ ತಿಳಿದುಬರಬೇಕಿದೆ.
ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ಸೇರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಸ್ಥಳದಲ್ಲಿ ಬೆಂಕಿಯನ್ನು ನಂದಿಸುವ ಕಾರ್ಯವನ್ನು ಅಗ್ನಿಶಾಮಕ ಸಿಬ್ಬಂದಿ ನಡೆಸಿದ್ದಾರೆ.





















