SK Home Ad
Home ಸುದ್ದಿ ದೇಶ ಕ್ಷಿಪಣಿ ದಾಳಿ: ಒಮಾನ್‌ನಲ್ಲಿ ಸಂಕಷ್ಟ ಸಿಲುಕಿದ ಭಾರತೀಯ ನಾವಿಕರು

ಕ್ಷಿಪಣಿ ದಾಳಿ: ಒಮಾನ್‌ನಲ್ಲಿ ಸಂಕಷ್ಟ ಸಿಲುಕಿದ ಭಾರತೀಯ ನಾವಿಕರು

0
35

ಮುಂಬೈ: ಒಮಾನ್ ಕರಾವಳಿಯಲ್ಲಿ ನಾವಿಕರನ್ನು ಹೊತ್ತೊಯ್ಯುತ್ತಿದ್ದ ‘ಎಂಟಿ ಮಾರಿಸ್ಯಾಕ್ಸ್’ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ಅಪ್ಪಳಿಸಿದ್ದು, ಅದರಲ್ಲಿದ್ದ 24 ಭಾರತೀಯ ನಾವಿಕರು ಸಂಕಷ್ಟಕ್ಕೆ ಸಿಲುಕಿದ್ದರು.

ಸೋಮವಾರ ಮಧ್ಯಾಹ್ನ 1.30 ರ ಸುಮಾರಿಗೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯ ಬಳಿಕ ನಾವಿಕರು ತುರ್ತು ರಕ್ಷಣೆಗಾಗಿ ‘SOS’ ಕರೆಗಳನ್ನು ಮಾಡಿದ್ದಾರೆ. ಅಲ್ಲದೆ, ತಕ್ಷಣದ ನೆರವಿಗಾಗಿ ‘ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ’ (FSUI) ಸಂಸ್ಥೆಯನ್ನು ಕೋರಿದ್ದಾರೆ.

ಈ ಅವಘಡದ ಕುರಿತು ಭಾರತ ಸರ್ಕಾರಕ್ಕೆ ಮಾಹಿತಿ ನೀಡಿರುವ ಎಫ್‌ಎಸ್‌ಯುಐ, ಒಮಾನ್ ಸರ್ಕಾರದೊಂದಿಗೆ ತುರ್ತು ಮಾತುಕತೆ ನಡೆಸಿ ಎಲ್ಲ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸುವಂತೆ ಮನವಿ ಮಾಡಿತ್ತು.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಒಮಾನ್ ಅಧಿಕಾರಿಗಳು, ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದೊಂದಿಗೆ ನಿರಂತರ ಸಮನ್ವಯ ಸಾಧಿಸುತ್ತಿರುವುದಾಗಿ ತಿಳಿಸಿದ್ದಾರೆ.

ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ಹಡಗಿನಲ್ಲಿದ್ದ ಒಟ್ಟು 24 ಭಾರತೀಯ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.