ಛತ್ತೀಸಗಢ: ಛತ್ತೀಸಗಢದಲ್ಲಿ ಕೈಗಾರಿಕಾ ಅವಘಡ ಸಂಭವಿಸಿದ್ದು, ವೇದಾಂತ ಸಂಸ್ಥೆಯ ಪವರ್ ಪ್ಲಾಂಟ್‌ನಲ್ಲಿ ನಡೆದ ಬಾಯ್ಲರ್ ಸ್ಫೋಟದಲ್ಲಿ ಮೃತಪಟ್ಟ ಕಾರ್ಮಿಕರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ದುರಂತ ಮಂಗಳವಾರ ಮಧ್ಯಾಹ್ನ ಸಿಂಘಿತರಾಯ್ ಗ್ರಾಮದ ಸಮೀಪ ಸಂಭವಿಸಿದೆ.
ಘಟನೆ ಹೇಗೆ ನಡೆದಿದೆ? : ಪ್ರಾಥಮಿಕ ಮಾಹಿತಿ ಪ್ರಕಾರ, ಪವರ್ ಪ್ಲಾಂಟ್‌ನ ಬಾಯ್ಲರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಯಿಂದಾಗಿ ಹಲವಾರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳ ಸ್ಥಿತಿ : ಘಟನೆಯಲ್ಲಿ ಗಾಯಗೊಂಡ 10ಕ್ಕೂ ಹೆಚ್ಚು ಕಾರ್ಮಿಕರು ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.
ಪರಿಹಾರ ಘೋಷಣೆ : ಘಟನೆಯ ಹಿನ್ನೆಲೆಯಲ್ಲಿ ಛತ್ತೀಸಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ₹50 ಸಾವಿರ ತುರ್ತು ನೆರವು ನೀಡಲಾಗುತ್ತಿದೆ. ಇದೇ ವೇಳೆ ವೇದಾಂತ ಕಂಪನಿಯು ಮೃತರ ಕುಟುಂಬಕ್ಕೆ ತಲಾ ₹35 ಲಕ್ಷ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗ ಮತ್ತು ಗಾಯಾಳುಗಳಿಗೆ ತಲಾ ₹15 ಲಕ್ಷ ಪರಿಹಾರ ಹಾಗೂ ಸಂಪೂರ್ಣ ಗುಣಮುಖರಾಗುವವರೆಗೆ ಸಂಬಳ ಪಾವತಿ ಎಂದು ಘೋಷಿಸಿದೆ.























