ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವಿನ ಹಣಕಾಸಿನ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದರ ಬೆನ್ನಲ್ಲೇ, ಧನ್ವೀರ್ ಇನ್‌ಸ್ಟಾಗ್ರಾಮ್‌ನಲ್ಲಿ ದರ್ಶನ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ನಟ ಧನ್ವೀರ್ ಸ್ಪಷ್ಟನೆ ನೀಡಿದ್ದು, ತಾವು ದರ್ಶನ್ ಅವರನ್ನು ಅನ್‌ಫಾಲೋ ಮಾಡಿಲ್ಲ, ಬದಲಿಗೆ ದರ್ಶನ್ ಖಾತೆಯಿಂದ ತಮ್ಮನ್ನು ಬ್ಲಾಕ್ ಮಾಡಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತನ್ನನ್ನು ಕೆಟ್ಟವನನ್ನಾಗಿ ಬಿಂಬಿಸಲು ಎಷ್ಟೇ ನೆಗೆಟಿವ್ ಪಿಆರ್ ತಂತ್ರಗಳನ್ನು ಬಳಸಿದರೂ, ದರ್ಶನ್ ಮೇಲಿರುವ ತಮ್ಮ ಅಭಿಮಾನ ಮತ್ತು ಗೌರವ ಎಂದಿಗೂ ಬದಲಾಗುವುದಿಲ್ಲ ಎಂದು ಧನ್ವೀರ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘ದರ್ಶನ್ ಸರ್.. ದೆನ್, ನೌ, ಫಾರ್ಎವರ್’ ಎಂದು ಬರೆದುಕೊಂಡಿರುವ ಅವರು, ತಮ್ಮ ಹೃದಯದಲ್ಲಿ ದರ್ಶನ್ ಅವರಿಗೆ ಇರುವ ಸ್ಥಾನಕ್ಕೆ ಯಾರೂ ಬೀಗ ಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದೆಡೆ, ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವಿನ ಹಣಕಾಸು ವ್ಯವಹಾರ ದೊಡ್ಡ ಮಟ್ಟದ ಮುನಿಸಿಗೆ ಕಾರಣವಾಗಿದೆ. ವಿಜಯಲಕ್ಷ್ಮಿ ಅವರಿಂದ ಸುಮಾರು 10 ಕೋಟಿ ರೂಪಾಯಿ ಪಡೆದು ವಾಪಸ್ ನೀಡದ ಹಿನ್ನೆಲೆಯಲ್ಲಿ, ದರ್ಶನ್ ಆಪ್ತರು ಧನ್ವೀರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ವಂಚನೆ ಹಾಗೂ ಬೆದರಿಕೆ ದೂರು ದಾಖಲಿಸಿದ್ದಾರೆ. ಈ ಬೆಳವಣಿಗೆಗಳು ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.





















