Home Advertisement
Home ಸಿನಿ ಮಿಲ್ಸ್ ಹ್ಯಾಟ್ರಿಕ್ ಗೆಲುವಿನತ್ತ ದುನಿಯಾ ವಿಜಯ್: ಗಮನ ಸೆಳೆಯುತ್ತಿದೆ ‘ಸಿಟಿ ಲೈಟ್ಸ್’ ಚಿತ್ರದ ಹೊಸ ಹಾಡು

ಹ್ಯಾಟ್ರಿಕ್ ಗೆಲುವಿನತ್ತ ದುನಿಯಾ ವಿಜಯ್: ಗಮನ ಸೆಳೆಯುತ್ತಿದೆ ‘ಸಿಟಿ ಲೈಟ್ಸ್’ ಚಿತ್ರದ ಹೊಸ ಹಾಡು

0
143

ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ದುನಿಯಾ’ ವಿಜಯ್ ಈಗ ಕೇವಲ ನಟನಾಗಿ ಮಾತ್ರವಲ್ಲದೆ, ಯಶಸ್ವಿ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದಾರೆ. ‘ಸಲಗ’ ಮತ್ತು ‘ಭೀಮಾ’ ಚಿತ್ರಗಳ ಭರ್ಜರಿ ಯಶಸ್ಸಿನ ನಂತರ ವಿಜಯ್ ಈಗ ತಮ್ಮ ಮೂರನೇ ನಿರ್ದೇಶನದ ‘ಸಿಟಿ ಲೈಟ್ಸ್’ ಚಿತ್ರದ ಮೂಲಕ ಮತ್ತೇ ಸುದ್ದಿಯಲ್ಲಿದ್ದಾರೆ. ಇಂದು ಈ ಸಿನಿಮಾದ ಬಹುನಿರೀಕ್ಷಿತ ಹಾಡು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.

ಈ ಚಿತ್ರದಲ್ಲಿ ಯುವ ಪ್ರತಿಭೆ ನಟ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದು, ವಿಶೇಷವೆಂದರೆ ದುನಿಯಾ ವಿಜಯ್ ಪುತ್ರಿ ಮೋನಿಶಾ ವಿಜಯ್ ಕುಮಾರ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಇಂದು ಬಿಡುಗಡೆಯಾದ ಹಾಡಿನಲ್ಲಿ “ನಮ್ಮನ್ನ ಬದುಕೋಕೆ ಬಿಡ್ರೂ” ಎಂಬ ಸಾಲುಗಳು ಕೇಳಿಬರುತ್ತಿದ್ದು, ಯುವಜನತೆಯ ಗಮನ ಸೆಳೆಯುತ್ತಿವೆ. ಸ್ವತಃ ವಿಜಯ್ ಸಾಹಿತ್ಯ ಬರೆದಿರುವ ‘ಭಾವಾ ಭಾವಾ’ ಎಂಬ ಈ ರ್ಯಾಪ್ ಸಾಂಗ್ ಸದ್ಯ ಸಖತ್ ವೈರಲ್ ಆಗುತ್ತಿದೆ.

ಈ ಹಿಂದೆ ವಿಜಯ್ ನಿರ್ದೇಶನದ ‘ಭೀಮಾ’ ಚಿತ್ರದ ರ್ಯಾಪ್ ಹಾಡುಗಳು ರಾಜ್ಯಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿದ್ದವು. ಅದೇ ಹಾದಿಯಲ್ಲಿ ‘ಸಿಟಿ ಲೈಟ್ಸ್’ ಚಿತ್ರದ ಈ ಹಾಡು ಕೂಡ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್‌ಗಳಲ್ಲಿ ಧೂಳೆಬ್ಬಿಸುತ್ತಿದೆ. ವಿಜಯ್ ವಿಭಿನ್ನ ಮೇಕಿಂಗ್ ಮತ್ತು ಮಾಸ್ ಶೈಲಿಯ ಸಾಹಿತ್ಯ ಅಭಿಮಾನಿಗಳಲ್ಲಿ ಕುತೂಹಲವನ್ನು ಇಮ್ಮಡಿಗೊಳಿಸಿದೆ.

ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಚಿತ್ರತಂಡ, ಸಿನಿಮಾದ ಕಥಾಹಂದರದ ಬಗ್ಗೆ ಸಣ್ಣ ಸುಳಿವು ನೀಡಿದೆ. ‘ಸಿಟಿ ಲೈಟ್ಸ್’ ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜದಲ್ಲಿ ಹೆಣ್ಣುಮಕ್ಕಳು ಎದುರಿಸುವ ಸವಾಲುಗಳು ಮತ್ತು ಜಾಗೃತಿ ಮೂಡಿಸುವಂತಹ ಅಂಶಗಳನ್ನು ಒಳಗೊಂಡಿದೆ. ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಉದ್ದೇಶದಿಂದ ಈ ಸಿನಿಮಾ ರೂಪಿಸಲಾಗಿದೆ ಎಂದು ನಿರ್ದೇಶಕ ವಿಜಯ್ ತಿಳಿಸಿದ್ದಾರೆ. ವಿನಯ್ ರಾಜ್‌ಕುಮಾರ್ ಹೊಸ ಅವತಾರ ನೋಡಲು ಅಭಿಮಾನಿಗಳು ಈಗಿನಿಂದಲೇ ಕಾತರರಾಗಿದ್ದಾರೆ.