SK Home Ad
Home ಸಿನಿ ಮಿಲ್ಸ್ ನಟಿಯರ ಕೈಹಿಡಿದು ಎಳೆದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್: ವಿಡಿಯೋ ವೈರಲ್, ನೆಟ್ಟಿಗರ ಭಾರಿ...

ನಟಿಯರ ಕೈಹಿಡಿದು ಎಳೆದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್: ವಿಡಿಯೋ ವೈರಲ್, ನೆಟ್ಟಿಗರ ಭಾರಿ ಆಕ್ರೋಶ!

0
24

ಟಾಲಿವುಡ್ ಚಿತ್ರರಂಗದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ವರ್ತನೆಯೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಸಿನಿಮಾವೊಂದರ ಮುಹೂರ್ತ ಸಮಾರಂಭದಲ್ಲಿ ಹಿರಿಯ ನಿರ್ದೇಶಕ ಸ್ಟಾರ್ ನಟಿಯರಾದ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಕೈಗಳನ್ನು ಹಿಡಿದು ಎಳೆದಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರಿ ಟೀಕೆ ವ್ಯಕ್ತವಾಗುತ್ತಿದೆ.

ನಿರ್ದೇಶಕ ಅನಿಲ್ ರವಿಪುಡಿ ಸಾರಥ್ಯದಲ್ಲಿ, ಹಿರಿಯ ನಟ ವೆಂಕಟೇಶ್ ಮತ್ತು ಕಲ್ಯಾಣ್ ರಾಮ್ ನಂದಮೂರಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಹೊಸ ಚಿತ್ರದ ಮುಹೂರ್ತ ಸಮಾರಂಭವು ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ 84 ವರ್ಷದ ರಾಘವೇಂದ್ರ ರಾವ್ ಚಿತ್ರದ ಮೊದಲ ದೃಶ್ಯಕ್ಕೆ ಆ್ಯಕ್ಷನ್-ಕಟ್ ಹೇಳಲು ಆಹ್ವಾನಿಸಲಾಗಿತ್ತು.

ದೃಶ್ಯವನ್ನು ನಿರ್ದೇಶಿಸುವ ಸಂದರ್ಭದಲ್ಲಿ, ನಟಿಯರು ನಟರ ಹೆಗಲ ಮೇಲೆ ಹೇಗೆ ಕೈ ಇಡಬೇಕು ಎಂದು ತೋರಿಸಿಕೊಡುವ ನೆಪದಲ್ಲಿ ರಾಘವೇಂದ್ರ ರಾವ್ ಮೊದಲು ಕೀರ್ತಿ ಸುರೇಶ್ ಕೈ ಹಿಡಿದು ಹತ್ತಿರಕ್ಕೆ ಎಳೆದಿದ್ದಾರೆ. ತಕ್ಷಣವೇ ಮತ್ತೊಬ್ಬ ನಟಿ ಕೃತಿ ಶೆಟ್ಟಿ ಕೈಯನ್ನೂ ಬಲವಂತವಾಗಿ ಹಿಡಿದು ಎಳೆದಿದ್ದಾರೆ. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ನಟಿಯರ ಒಪ್ಪಿಗೆಯಿಲ್ಲದೆ ಸಾರ್ವಜನಿಕವಾಗಿ ಇಂತಹ ವರ್ತನೆ ತೋರಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಘವೇಂದ್ರ ರಾವ್ ಇಂತಹ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ನಟಿ ನಿಹಾರಿಕಾ ಕೊನಿಡೇಲ ವಿಷಯದಲ್ಲೂ ನಿರ್ದೇಶಕ ಇದೇ ರೀತಿ ನಡೆದುಕೊಂಡು ಸಾರ್ವಜನಿಕರ ಟ್ರೋಲ್‌ಗೆ ತುತ್ತಾಗಿದ್ದರು. “ಹಳೇ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಇಲ್ಲದ ಕಾರಣ ಇಂತಹ ವರ್ತನೆಗಳು ಮುಚ್ಚಿಹೋಗುತ್ತಿದ್ದವು, ಆದ್ರೆ ಈಗಲೂ ಇವರು ಇಂತಹ ಕೀಳು ಮಟ್ಟದ ನಡವಳಿಕೆಯನ್ನು ಮುಂದುವರಿಸುತ್ತಿರುವುದು ಸರಿಯಲ್ಲ” ಎಂದು ನೆಟ್ಟಿಗರು ಎಕ್ಸ್ (ಟ್ವಿಟರ್) ಸೇರಿದಂತೆ ವಿವಿಧ ವೇದಿಕೆಗಳಲ್ಲಿ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.