‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ‘ಸುರಭಿ’ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ಪ್ರತಿಭಾವಂತ ನಟಿ ಚೈತ್ರಾ ಜೆ ಆಚಾರ್. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಇವರಿಗೆ, ಕಾಲಿವುಡ್‌ನ ನ್ಯಾಷನಲ್ ಅವಾರ್ಡ್ ವಿನ್ನರ್, ಸ್ಟಾರ್ ನಟ ಧನುಷ್‌ಗೆ ನಾಯಕಿಯಾಗುವ ಬಹುದೊಡ್ಡ ಅವಕಾಶವೊಂದು ಒಲಿದು ಬಂದಿತ್ತು. ಆದರೆ, ಕೊನೆ ಕ್ಷಣದಲ್ಲಿ ಆ ಬಂಪರ್ ಆಫರ್ ಚೈತ್ರಾ ಕೈತಪ್ಪಿದೆ. ಶೂಟಿಂಗ್ ಹಂತದವರೆಗೂ ಹೋಗಿದ್ದ ಈ ಮೆಗಾ ಪ್ರಾಜೆಕ್ಟ್‌ನಿಂದ ಅವರು ಹೊರಬರಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ.
ಆ ಒಂದು ‘ಲುಕ್’ ಮಾಡಿತು ಎಡವಟ್ಟು!: ‘ಪೋರ್ ತೊಳಿಲ್’ ಖ್ಯಾತಿಯ ಯಶಸ್ವಿ ನಿರ್ದೇಶಕ ವಿಘ್ನೇಶ್ ರಾಜಾ, ಇದೀಗ ಧನುಷ್ ನಾಯಕನಾಗಿ ನಟಿಸುತ್ತಿರುವ ‘ಕರ’ (Kara) ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ನಾಯಕಿಯ ಹುಡುಕಾಟದಲ್ಲಿದ್ದ ನಿರ್ದೇಶಕರಿಗೆ ಮೊದಲು ಕಣ್ಣಿಗೆ ಬಿದ್ದಿದ್ದೇ ಚೈತ್ರಾ ಆಚಾರ್. ಅವರ ನಟನೆಗೆ ಮಾರುಹೋಗಿದ್ದ ನಿರ್ದೇಶಕರು, ಲುಕ್ ಟೆಸ್ಟ್ ಕೂಡ ಮಾಡಿಸಿ ಫೈನಲ್ ಮಾಡಿದ್ದರು.
ಆದರೆ, ಇಲ್ಲಿಯೇ ಅಸಲಿ ಟ್ವಿಸ್ಟ್ ಎದುರಾಯಿತು. ಚೈತ್ರಾ ಅವರು ಕನ್ನಡದಲ್ಲಿ ಹಿರಿಯ ನಟ ಶಶಿಕುಮಾರ್ ಪುತ್ರನ ಜೊತೆ ‘ಮೈ ಲಾರ್ಡ್’ ಎಂಬ ಚಿತ್ರದಲ್ಲಿಯೂ ನಟಿಸಿದ್ದಾರೆ. ಕಾಕತಾಳೀಯವೆಂಬಂತೆ ‘ಮೈ ಲಾರ್ಡ್’ ಹಾಗೂ ಧನುಷ್‌ರ ‘ಕರ’ ಚಿತ್ರದ ನಾಯಕಿಯ ಗೆಟಪ್ (Look) ಬಹುತೇಕ ಒಂದೇ ತರಹ ಇತ್ತಂತೆ. ಅಲ್ಲದೆ, ಧನುಷ್ ಸಿನಿಮಾ ಬರುವ ಮುನ್ನವೇ ‘ಮೈ ಲಾರ್ಡ್’ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಪರದೆಯ ಮೇಲೆ ನಾಯಕಿಯ ಲುಕ್ ಪ್ರೇಕ್ಷಕರಿಗೆ ಹೊಸದಾಗಿ ಕಾಣಿಸುವುದಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ, ನಿರ್ದೇಶಕ ವಿಘ್ನೇಶ್ ರಾಜಾ ಅನಿವಾರ್ಯವಾಗಿ ಚೈತ್ರಾ ಅವರನ್ನು ಕೈಬಿಟ್ಟಿದ್ದಾರೆ.
ಚೈತ್ರಾ ಜಾಗಕ್ಕೆ ಎಂಟ್ರಿಕೊಟ್ಟ ಮಲಯಾಳಂ ಬ್ಯೂಟಿ: ಚೈತ್ರಾ ಆಚಾರ್ ಅವರಿಂದ ತೆರವಾದ ಆ ಭಾರಿ ಅವಕಾಶ ಇದೀಗ ‘ಪ್ರೇಮಲು’ ಸಿನಿಮಾ ಖ್ಯಾತಿಯ ಮಲಯಾಳಂ ನಟಿ ಮಮಿತಾ ಬೈಜು ಪಾಲಾಗಿದೆ. ಹೆಚ್ಚಾಗಿ ಬಬ್ಲಿ ಪಾತ್ರಗಳ ಮೂಲಕವೇ ಫೇಮಸ್ ಆಗಿರುವ ಮಮಿತಾ, ಕಥೆ ಕೇಳಿದ ತಕ್ಷಣವೇ ಈ ಸೀರಿಯಸ್ ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
ಏಪ್ರಿಲ್ 30ರಂದು ‘ಕರ’ ರಿಲೀಸ್: ಧನುಷ್ ನಟನೆಯ ಈ ‘ಕರ’ ಸಿನಿಮಾ ಏಪ್ರಿಲ್ 30ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತವಿರುವ ಈ ಚಿತ್ರದಲ್ಲಿ ಜಯರಾಮ್, ಸೂರಜ್ ವೆಂಜಾರಮೂಡು ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಚೈತ್ರಾ ಆಚಾರ್ ಅವರಿಗೆ ಧನುಷ್ ಜೊತೆ ನಟಿಸುವಂತಹ ಈ ಬೃಹತ್ ಅವಕಾಶ ಕೈತಪ್ಪಿರಬಹುದು. ಆದರೆ, ಅವರ ಸಹಜ ಅಭಿನಯ ಹಾಗೂ ಪ್ರತಿಭೆಗೆ ಭವಿಷ್ಯದಲ್ಲಿ ಇಂತಹ ಹತ್ತಾರು ದೊಡ್ಡ ಪ್ರಾಜೆಕ್ಟ್‌ಗಳು ಒಲಿದುಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಸದ್ಯಕ್ಕಂತೂ ಚೈತ್ರಾ ಪರಭಾಷೆಯಲ್ಲೂ ತಮ್ಮ ಛಾಪು ಮೂಡಿಸಲು ಸಜ್ಜಾಗುತ್ತಿದ್ದಾರೆ.























