SK Home Ad
Home ವಿಶೇಷ ಸುದ್ದಿ 26/11 ದಾಳಿ; 18 ವರ್ಷಗಳಾದರೂ ಅಜ್ಮಲ್ ಕಸಬ್ ಪರ ವಾದಿಸಿದ್ದ ವಕೀಲರಿಗೆ ಸಿಗದ ಸಂಭಾವನೆ

26/11 ದಾಳಿ; 18 ವರ್ಷಗಳಾದರೂ ಅಜ್ಮಲ್ ಕಸಬ್ ಪರ ವಾದಿಸಿದ್ದ ವಕೀಲರಿಗೆ ಸಿಗದ ಸಂಭಾವನೆ

0
5

ಮುಂಬೈ: 2008ರ ನವೆಂಬರ್ 26ರಂದು ನಡೆದ ಮುಂಬೈ ಉಗ್ರರ ದಾಳಿಗೆ 18 ವರ್ಷಗಳು ಕಳೆದಿವೆ. ಈ ಕರಾಳ ಘಟನೆಯ ಪ್ರಮುಖ ಆರೋಪಿ ಅಜ್ಮಲ್ ಕಸಬ್ಗೆ 2012ರಲ್ಲಿ ಗಲ್ಲು ಶಿಕ್ಷೆ ಜಾರಿಯಾಗಿದ್ದರೂ, ಆತನ ಪರವಾಗಿ ಬಾಂಬೆ ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದ ಇಬ್ಬರು ವಕೀಲರಿಗೆ ಇನ್ನೂ ತಮ್ಮ ವೃತ್ತಿಪರ ಸಂಭಾವನೆ ಪಾವತಿಯಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಎಂಬ ವಕೀಲರು ತಮ್ಮ ಬಾಕಿ ಹಣಕ್ಕಾಗಿ ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಯಾವುದೇ ಅಂತಿಮ ಪರಿಹಾರ ದೊರೆತಿಲ್ಲ ಎಂದು ತಿಳಿಸಿದ್ದಾರೆ.

2010ರಲ್ಲಿ ಅಜ್ಮಲ್ ಕಸಬ್ನ ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ನಲ್ಲಿ ಆತನ ಪರ ವಾದಿಸಲು ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಅವರನ್ನು ಮಹಾರಾಷ್ಟ್ರ ಸರ್ಕಾರ ನೇಮಕ ಮಾಡಿತ್ತು. ಸುಮಾರು ಒಂಬತ್ತು ತಿಂಗಳ ಕಾಲ ಇಬ್ಬರೂ ವಕೀಲರು ಪ್ರಕರಣದ ವಿಚಾರಣೆಯಲ್ಲಿ ಭಾಗವಹಿಸಿದ್ದರು. ಈ ಅವಧಿಯಲ್ಲಿ ತಮ್ಮ ಇತರ ಪ್ರಕರಣಗಳನ್ನು ಬದಿಗಿಟ್ಟು ಕಸಬ್ ಪ್ರಕರಣದ ವಾದಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದಾಗಿ ವಕೀಲರು ಹೇಳಿದ್ದಾರೆ.

2010ರ ಜೂನ್ 8ರಂದು ಹೊರಡಿಸಲಾದ ನೇಮಕಾತಿ ಅಧಿಸೂಚನೆಯಲ್ಲಿ ಅವರ ಸಂಭಾವನೆಯ ವಿವರಗಳನ್ನು ನಿಗದಿಪಡಿಸಲಾಗಿತ್ತು. ಮೂಲಗಳ ಪ್ರಕಾರ, ದಿನಕ್ಕೆ ಸುಮಾರು ₹1,500ರಿಂದ ₹2,000ರ ವರೆಗೆ ಸಂಭಾವನೆ ನಿಗದಿಯಾಗಿತ್ತು. ಆದರೆ ಹೈಕೋರ್ಟ್ ವಿಚಾರಣೆ ಮುಗಿದು ಹಲವು ವರ್ಷಗಳು ಕಳೆದರೂ ಹಣ ಪಾವತಿಯಾಗಿಲ್ಲ ಎಂಬುದು ವಕೀಲರ ಆರೋಪವಾಗಿದೆ.

ಬಾಕಿ ಹಣಕ್ಕೆ ದಾಖಲೆಗಳ ಬೇಡಿಕೆ
ವಕೀಲ ಅಮೀನ್ ಸೋಲ್ಕರ್ ಅವರು ತಮ್ಮ ಸಂಭಾವನೆಗಾಗಿ ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ಫರ್ಹಾನಾ ಶಾ ಅವರು ಒಂಬತ್ತು ತಿಂಗಳ ಕಾಲ ಪ್ರಕರಣಕ್ಕಾಗಿ ತಮ್ಮ ಸಂಪೂರ್ಣ ಸಮಯವನ್ನು ಮೀಸಲಿಟ್ಟಿದ್ದೇವೆ. ಇತರ ಪ್ರಕರಣಗಳನ್ನೂ ಮುಂದೂಡಿದ್ದೇವೆ. ನೇಮಕಾತಿ ಆದೇಶದಲ್ಲಿಯೇ ಸಂಭಾವನೆಯ ವಿವರ ಸ್ಪಷ್ಟವಾಗಿದ್ದರೂ ಹೆಚ್ಚುವರಿ ದಾಖಲೆಗಳನ್ನು ಕೇಳುತ್ತಿರುವುದು ಸರಿಯಲ್ಲ ಎಂದು ಪ್ರಶ್ನಿಸಿದ್ದಾರೆ.

ಆದರೆ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಸಂಭಾವನೆ ಪಾವತಿಸಲು ವಕೀಲರು ಅಧಿಕೃತ ಬಿಲ್ಗಳು ಮತ್ತು ವಿಚಾರಣೆಗೆ ಹಾಜರಾದ ದಿನಾಂಕ ಹಾಗೂ ಸಮಯದ ವಿವರಗಳನ್ನು ಸಲ್ಲಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ.
ಇದೇ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಅಜ್ಮಲ್ ಕಸಬ್ ಪರ ವಾದಿಸಿದ್ದ ವಕೀಲ ಅಬ್ಬಾಸ್ ಕಾಜ್ಮಿ ಅವರಿಗೆ ವಿಚಾರಣೆ ಪೂರ್ಣಗೊಂಡ ಬಳಿಕ ಸಂಭಾವನೆ ಪಾವತಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ಚರ್ಚೆಗೆ ಕಾರಣ
26/11 ದಾಳಿಯ ಪ್ರಮುಖ ಆರೋಪಿ ಅಜ್ಮಲ್ ಕಸಬ್ನನ್ನು 2012ರ ನವೆಂಬರ್ 21ರಂದು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಆದರೆ ಆತನ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲರ ಸಂಭಾವನೆ ಪಾವತಿ ವಿಚಾರ ಮಾತ್ರ ಇನ್ನೂ ಬಗೆಹರಿದಿಲ್ಲ. ನ್ಯಾಯಾಲಯದಿಂದ ನೇಮಕಗೊಂಡ ವಕೀಲರಿಗೆ ಸಮಯಕ್ಕೆ ಸರಿಯಾಗಿ ಸಂಭಾವನೆ ಪಾವತಿಸುವ ವ್ಯವಸ್ಥೆಯ ಕುರಿತು ಈ ಪ್ರಕರಣ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.