ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಇಂದು ವಿಶ್ವ ಕ್ರಿಕೆಟ್‌ನ ಮಾರಕ ಬೌಲರ್‌ಗಳಲ್ಲಿ ಒಬ್ಬರು. ಆದರೆ 2014ರ ಐಪಿಎಲ್ ಮೆಗಾ ಹರಾಜಿನಲ್ಲಿ ಈ ಅಪ್ರತಿಮ ಪ್ರತಿಭೆಯನ್ನು ಖರೀದಿಸುವ ಸುವರ್ಣಾವಕಾಶವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೈಚೆಲ್ಲಿತ್ತು ಎಂಬ ಆಘಾತಕಾರಿ ರಹಸ್ಯವನ್ನು ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಪಾರ್ಥಿವ್ ಪಟೇಲ್ ಬಹಿರಂಗಪಡಿಸಿದ್ದಾರೆ.
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಪಾರ್ಥಿವ್ ಪಟೇಲ್, “2014ರ ಹರಾಜಿನ ಮೊದಲ ದಿನ ಆರ್‌ಸಿಬಿ ನನ್ನನ್ನು ಖರೀದಿಸಿದಾಗ, ಅವರ ಸಂದೇಶ ನನಗೆ ಬಂತು. ಆ ಸಂದರ್ಭದಲ್ಲಿ ಗುಜರಾತ್ ಪರ ನನ್ನ ಜೊತೆ ಆಡುತ್ತಿದ್ದ ಯುವ ವೇಗಿ ಜಸ್ಪ್ರೀತ್ ಬುಮ್ರಾನನ್ನು ತಂಡಕ್ಕೆ ತೆಗೆದುಕೊಳ್ಳಿ ಎಂದು ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಸಲಹೆ ನೀಡಿದ್ದೆ.
ಆದರೆ ಅವರು ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ‘ಈ ಬುಮ್ರಾ-ಗಿಮ್ರಾ ಏನ್ ಮಾಡ್ತಾನೆ?’ (Yeh Bumrah-Wumrah Kya Kar Lenge) ಎಂಬಂತೆ ಹಗುರವಾಗಿ ಪ್ರತಿಕ್ರಿಯಿಸಿ ತಿರಸ್ಕರಿಸಿದರು” ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಒಂದು ವೇಳೆ ಅಂದು ಆರ್‌ಸಿಬಿ ಆ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಇಬ್ಬರೂ ಒಂದೇ ಫ್ರಾಂಚೈಸಿ ಪರ ಕಣಕ್ಕಿಳಿಯುವ ಅಪರೂಪದ ದೃಶ್ಯ ಅಭಿಮಾನಿಗಳಿಗೆ ಸಿಗುತ್ತಿತ್ತು.
ಆದರೆ ಆರ್‌ಸಿಬಿ ಕೈಬಿಟ್ಟ ಬುಮ್ರಾನನ್ನು ಮುಂಬೈ ಇಂಡಿಯನ್ಸ್ ತೆಕ್ಕೆಗೆ ತೆಗೆದುಕೊಂಡಿತು. ನಂತರ ಮುಂಬೈ ಪರ 4 ಐಪಿಎಲ್ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬುಮ್ರಾ, ವಿಶ್ವದ ಶ್ರೇಷ್ಠ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಇತಿಹಾಸ ನಿರ್ಮಿಸಿದರು. ಆರ್‌ಸಿಬಿಯ ಈ ಒಂದು ತಪ್ಪು ನಿರ್ಧಾರ ಇಂದಿಗೂ ಅವರ ಬೌಲಿಂಗ್ ಇತಿಹಾಸದ ಬಹುದೊಡ್ಡ ಎಡವಟ್ಟು ಎಂದೇ ಪರಿಗಣಿಸಲಾಗಿದೆ.






















