SK Home Ad
Home ಸಿನಿ ಮಿಲ್ಸ್ ಪೌರಾಣಿಕ ಪಾತ್ರದಲ್ಲಿ ಅಕ್ಷಯ್ ಖನ್ನ: ಆ24ಕ್ಕೆ ‘ಮಹಾಕಾಳಿ’ ಫಸ್ಟ್ ಲುಕ್

ಪೌರಾಣಿಕ ಪಾತ್ರದಲ್ಲಿ ಅಕ್ಷಯ್ ಖನ್ನ: ಆ24ಕ್ಕೆ ‘ಮಹಾಕಾಳಿ’ ಫಸ್ಟ್ ಲುಕ್

0
48
ಪ್ರಶಾಂತ್ ವರ್ಮ ಸಿನಿಮೀಯ ಬ್ರಹ್ಮಾಂಡಕ್ಕೆ ಅಕ್ಷಯ್ ಖನ್ನ ಎಂಟ್ರಿ; ‘ಮಹಾಕಾಳಿ’ಯಲ್ಲಿ ಮಹತ್ವದ ಪಾತ್ರ

‘ಧುರಂಧರ್’ ಬಳಿಕ ಅಕ್ಷಯ್ ಖನ್ನ ಹೊಸ ಅವತಾರ; ‘ಮಹಾಕಾಳಿ’ಯಲ್ಲಿ ಶುಕ್ರಾಚಾರ್ಯ

ಮುಂಬೈ: ‘ಧುರಂಧರ್’ ಸಿನಿಮಾದಲ್ಲಿನ ಗಮನಾರ್ಹ ಅಭಿನಯದ ಬಳಿಕ ಬಾಲಿವುಡ್ ನಟ ಅಕ್ಷಯ್ ಖನ್ನ ಇದೀಗ ನಿರ್ದೇಶಕ ಪ್ರಶಾಂತ್ ವರ್ಮ ಅವರ ಸಿನಿಮೀಯ ಬ್ರಹ್ಮಾಂಡದ (PVCU) ಮುಂದಿನ ಅಧ್ಯಾಯವಾದ ‘ಮಹಾಕಾಳಿ’ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಖನ್ನ ಅವರು ಅಸುರರ ಗುರು ಶುಕ್ರಾಚಾರ್ಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

‘ಮಹಾಕಾಳಿ’ ಚಿತ್ರತಂಡವು ಸಾಮಾಜಿಕ ಜಾಲತಾಣದಲ್ಲಿ ಅಕ್ಷಯ್ ಖನ್ನ ಅವರ ಪಾತ್ರವನ್ನು ಘೋಷಿಸಿದ್ದು, ಚಿತ್ರದಲ್ಲಿನ ಅವರ ಫಸ್ಟ್ ಲುಕ್ ಆಗಸ್ಟ್ 24, 2026ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಶುಕ್ರಾಚಾರ್ಯರ ಪಾತ್ರದಲ್ಲಿ ಅಕ್ಷಯ್ ಖನ್ನ ಅವರು ಹಿಂದೆಂದೂ ಕಾಣದ ರೀತಿಯ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡದ ತಿಳಿಸದೆ.

PVCUನ ಮುಂದಿನ ಅಧ್ಯಾಯ ‘ಮಹಾಕಾಳಿ’ : ಪ್ರಶಾಂತ್ ವರ್ಮ ಅವರು ಪರಿಕಲ್ಪನೆ ಮಾಡಿ, ಕಥೆಯನ್ನು ರಚಿಸಿರುವ ‘ಮಹಾಕಾಳಿ’ ಚಿತ್ರವು ಅವರ ಸಿನಿಮೀಯ ಬ್ರಹ್ಮಾಂಡದ ಮತ್ತೊಂದು ಮಹತ್ವದ ಅಧ್ಯಾಯವಾಗಿ ಮೂಡಿಬರುತ್ತಿದೆ. ಚಿತ್ರಕ್ಕೆ ಪೂಜಾ ಕೊಲ್ಲೂರು ನಿರ್ದೇಶನ ನೀಡುತ್ತಿದ್ದಾರೆ.

ಭಾರತೀಯ ಪೌರಾಣಿಕ ಹಿನ್ನೆಲೆ ಹಾಗೂ ಆಧುನಿಕ ಸಿನಿಮೀಯ ನಿರೂಪಣೆಯ ಸಂಯೋಜನೆಯೊಂದಿಗೆ ರೂಪುಗೊಳ್ಳುತ್ತಿರುವ ಈ ಚಿತ್ರದಲ್ಲಿ ಪೌರಾಣಿಕ ಪಾತ್ರಗಳನ್ನು ವಿಭಿನ್ನ ದೃಷ್ಟಿಕೋನದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ಷಯ್ ಖನ್ನ ಅವರ ಶುಕ್ರಾಚಾರ್ಯ ಪಾತ್ರದ ಘೋಷಣೆ ಕುತೂಹಲ ಹೆಚ್ಚಿಸಿದೆ.

ಪ್ರಮುಖ ತಾರಾಗಣದಲ್ಲಿ ಭೂಮಿ ಶೆಟ್ಟಿ, ರೋಹಿತ್ ಸರಾಫ್ : ‘ಮಹಾಕಾಳಿ’ ಚಿತ್ರದಲ್ಲಿ ಅಕ್ಷಯ್ ಖನ್ನ ಅವರೊಂದಿಗೆ ಭೂಮಿ ಶೆಟ್ಟಿ, ರೋಹಿತ್ ಸರಾಫ್ ಸೇರಿದಂತೆ ಹಲವು ಪ್ರಮುಖ ನಟರು ಅಭಿನಯಿಸುತ್ತಿದ್ದಾರೆ. ಚಿತ್ರದ ಕಥೆ, ಪಾತ್ರಗಳ ವಿನ್ಯಾಸ ಮತ್ತು ಪೌರಾಣಿಕ ಅಂಶಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂತ ಹಂತವಾಗಿ ಬಹಿರಂಗಪಡಿಸುವ ನಿರೀಕ್ಷೆಯಿದೆ.

ಚಿತ್ರವನ್ನು ಆರ್.ಕೆ. ದುಗ್ಗಲ್ ಪ್ರಸ್ತುತಪಡಿಸುತ್ತಿದ್ದು, ರಿವಾಜ್ ರಮೇಶ್ ದುಗ್ಗಲ್ ಅವರು ಆರ್‌ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.

ಬಹುಭಾಷೆಯಲ್ಲಿ ‘ಮಹಾಕಾಳಿ’ ಬಿಡುಗಡೆ : ‘ಮಹಾಕಾಳಿ’ ಚಿತ್ರವು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಇದರಿಂದಾಗಿ ಚಿತ್ರವನ್ನು ದೇಶದ ವಿವಿಧ ಭಾಷೆಯ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶ ಚಿತ್ರತಂಡಕ್ಕಿದೆ.

ಪ್ರಶಾಂತ್ ವರ್ಮ ಸಿನಿಮೀಯ ಬ್ರಹ್ಮಾಂಡದ ವಿಸ್ತರಣೆಯ ಭಾಗವಾಗಿರುವ ‘ಮಹಾಕಾಳಿ’ಯಲ್ಲಿ ಪೌರಾಣಿಕ ಕಥಾವಸ್ತುವನ್ನು ಯಾವ ರೀತಿಯಲ್ಲಿ ಕಟ್ಟಿಕೊಡಲಾಗಿದೆ ಎಂಬುದು ಈಗ ಸಿನಿಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಅಕ್ಷಯ್ ಖನ್ನ ಅವರಂತಹ ಅನುಭವಿ ನಟ ಶುಕ್ರಾಚಾರ್ಯರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಆಗಸ್ಟ್ 24, 2026ರಂದು ‘ಮಹಾಕಾಳಿ’ ಚಿತ್ರದ ಮೊದಲ ನೋಟ ಬಿಡುಗಡೆಯಾಗಲಿದ್ದು, ಅಕ್ಷಯ್ ಖನ್ನ ಅವರ ಶುಕ್ರಾಚಾರ್ಯ ಅವತಾರ ಹೇಗಿರಲಿದೆ ಎಂಬುದನ್ನು ಅಂದು ತಿಳಿಯಬಹುದಾಗಿದೆ.