Home Advertisement
Home ಸಿನಿ ಮಿಲ್ಸ್ ಒಂದೇ ಬ್ಯಾಂಕ್ ಖಾತೆಯಲ್ಲಿ 213 ಕೋಟಿ ರೂ. ಮೊತ್ತ: ಅಚ್ಚರಿ ಮೂಡಿಸಿದ ನಟ ವಿಜಯ್ ಸಂಪತ್ತು;...

ಒಂದೇ ಬ್ಯಾಂಕ್ ಖಾತೆಯಲ್ಲಿ 213 ಕೋಟಿ ರೂ. ಮೊತ್ತ: ಅಚ್ಚರಿ ಮೂಡಿಸಿದ ನಟ ವಿಜಯ್ ಸಂಪತ್ತು; ದಳಪತಿ ಹೂಡಿಕೆಯ ‘ಸೇಫ್’ ಗೇಮ್!

0
34

ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ವಿಜಯ್ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಒಟ್ಟು 624 ಕೋಟಿ ರೂಪಾಯಿಗಳ ನಿವ್ವಳ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ವಿಶೇಷವೆಂದರೆ, ವಿಜಯ್ ಹೂಡಿಕೆಯು ಶೇರು ಮಾರುಕಟ್ಟೆಗಿಂತ ಹೆಚ್ಚಾಗಿ ಬ್ಯಾಂಕ್ ಠೇವಣಿ ಮತ್ತು ರಿಯಲ್ ಎಸ್ಟೇಟ್‌ನಂತಹ ಸಾಂಪ್ರದಾಯಿಕ ಹಾಗೂ ಸುರಕ್ಷಿತ ಮಾರ್ಗಗಳತ್ತ ವಾಲಿರುವುದು ಕಂಡುಬಂದಿದೆ.

ನಗದು ಹಾಗೂ ಬ್ಯಾಂಕ್ ಠೇವಣಿ ವಿವರ: ವಿಜಯ್ ಒಟ್ಟು ಚರಾಸ್ತಿ ಸುಮಾರು 404 ಕೋಟಿ ರೂಪಾಯಿಗಳಷ್ಟಿದೆ. ಇದರಲ್ಲಿ ಅತ್ಯಂತ ವಿಶೇಷವೆಂದರೆ, ಸಾಲಿಗ್ರಾಮದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಒಂದೇ ಉಳಿತಾಯ ಖಾತೆಯಲ್ಲಿ 213 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತವನ್ನು ಹೊಂದಿದ್ದಾರೆ. ಇದರ ಜೊತೆಗೆ ವಿವಿಧ ನಾಲ್ಕು ಪ್ರಮುಖ ಬ್ಯಾಂಕುಗಳಲ್ಲಿ ಒಟ್ಟು 100 ಕೋಟಿ ರೂಪಾಯಿಗಳನ್ನು ಸ್ಥಿರ ಠೇವಣಿ (FD) ಇರಿಸಿದ್ದಾರೆ. 2024-25ನೇ ಹಣಕಾಸು ವರ್ಷದಲ್ಲಿ 184.53 ಕೋಟಿ ರೂಪಾಯಿಗಳ ಆದಾಯವನ್ನು ವರದಿ ಮಾಡಿದ್ದಾರೆ.

ರಿಯಲ್ ಎಸ್ಟೇಟ್ ಮತ್ತು ಸ್ಥಿರ ಆಸ್ತಿ: ಸುಮಾರು 220 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಹೊಂದಿರುವ ವಿಜಯ್, ಚೆನ್ನೈನ ಪ್ರಮುಖ ಪ್ರದೇಶಗಳಾದ ನೀಲಂಕರೈ, ಸಾಲಿಗ್ರಾಮ ಹಾಗೂ ಮೈಲಾಪುರದಲ್ಲಿ ಹತ್ತು ವಸತಿ ಕಟ್ಟಡಗಳನ್ನು ಹೊಂದಿದ್ದಾರೆ. ಇವುಗಳ ಮೌಲ್ಯ 115 ಕೋಟಿ ರೂಪಾಯಿಗಳಾಗಿವೆ. ಇನ್ನು ತ್ಯಾಗರಾಯ ನಗರ ಮತ್ತು ಶೋಲಿಂಗನಲ್ಲೂರು ಸೇರಿದಂತೆ ವಿವಿಧೆಡೆ ಇರುವ ವಾಣಿಜ್ಯ ಆಸ್ತಿಗಳ ಮೌಲ್ಯ 82.8 ಕೋಟಿ ರೂಪಾಯಿಯಷ್ಟಿದೆ. ಕೃಷಿ ಮತ್ತು ಕೃಷಿಯೇತರ ಭೂಮಿಯ ಮೇಲೆಯೂ ಸಹ ಗಣನೀಯ ಹೂಡಿಕೆ ಮಾಡಿದ್ದಾರೆ.

ಷೇರು ಮಾರುಕಟ್ಟೆಯಿಂದ ದೂರ: ವಿಜಯ್ ಹೂಡಿಕೆಯ ತಂತ್ರವು ಅತ್ಯಂತ ಸಂಪ್ರದಾಯಬದ್ಧವಾಗಿದೆ. ಒಟ್ಟು ಆಸ್ತಿಯಲ್ಲಿ ಷೇರು ಮಾರುಕಟ್ಟೆಯ ಪಾಲು ಕೇವಲ ಶೇ. 0.04 ಕ್ಕಿಂತ ಕಡಿಮೆ (ಸುಮಾರು 20 ಲಕ್ಷ ರೂ.) ಇದೆ. ಇದು ಮಾರುಕಟ್ಟೆಯ ಅಪಾಯಗಳನ್ನು ತೆಗೆದುಕೊಳ್ಳುವ ಬದಲು, ಸ್ಥಿರ ಆದಾಯ ನೀಡುವ ಆಸ್ತಿಗಳ ಮೇಲೆ ವಿಜಯ್‌ಗೆ ಇರುವ ನಂಬಿಕೆಯನ್ನು ತೋರಿಸುತ್ತದೆ.

ಐಷಾರಾಮಿ ಕಾರುಗಳು ಮತ್ತು ಸಾಲಮುಕ್ತ ಜೀವನ: ವಿಜಯ್ ಬಳಿ ಟೊಯೋಟಾ ಲೆಕ್ಸಸ್, ಬಿಎಂಡಬ್ಲ್ಯೂ ಐ7 ಮತ್ತು ಟೊಯೋಟಾ ವೆಲ್‌ಫೈರ್ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ವಾಹನಗಳಿವೆ. ಸುಮಾರು 1.2 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿರುವ ದಳಪತಿ, ತಮಗೆ ಯಾವುದೇ ರೀತಿಯ ಬ್ಯಾಂಕ್ ಸಾಲಗಳಿಲ್ಲ ಎಂದು ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಇನ್ನು ವಿಜಯ್‌ ಪತ್ನಿ ಸಂಗೀತಾ 15.76 ಕೋಟಿ ರೂಪಾಯಿ ಮೌಲ್ಯದ ಪ್ರತ್ಯೇಕ ಆಸ್ತಿಯನ್ನು ಘೋಷಿಸಿದ್ದಾರೆ.