SK Home Ad
Home ನಮ್ಮ ಜಿಲ್ಲೆ ವಿಜಯಪುರ ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು…!

ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು…!

0
46

ವಿಜಯಪುರ: ಇಡೀ ರಾಜ್ಯದಲ್ಲಿಯೇ ಬೆಚ್ಚಿ ಬೀಳಿಸಿದ್ದ ಆರು ಜನರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ.

ಆರೋಪಿ ಮಹೇಶ ತಳವಾರ (29) ಬಲಗಾಲಿಗೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಇಟ್ಟಿಂಗಿಹಾಳ ಗ್ರಾಮದ ಸುಮಾರು 1 ಕಿಮೀ ದೂರದಲ್ಲಿ ಸೋಮವಾರ ಬೆಳಗ್ಗೆ 5.30ರ ಸುಮಾರಿನಲ್ಲಿ ಆರೋಪಿ ಮಹೇಶ ಬಚ್ಚಿಟ್ಟುಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ದೊರಕಿತ್ತು.

ಈ ಖಚಿತ ಮಾಹಿತಿ ಮೇರೆಗೆ ಚಡಚಣ ಸಿಪಿಐ ಪರಶುರಾಮ ಮನಗೂಳಿ ಹಾಗೂ ಸಿಬ್ಬಂದಿ ಶೇಖರ ಪವಾರ, ವಿಜಯಕುಮಾರ ಬನಸೋಡೆ ಹಾಗೂ ಇನ್ನಿತರರೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸರನ್ನು ನೋಡಿದ ಆರೋಪಿ ಮಹೇಶ ಏಕಾಏಕಿ ಸಿಬ್ಬಂದಿ ಮೇಲೆ ಕಲ್ಲಿನಿಂದ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಸಿಪಿಐ ಪರಶುರಾಮ ಅವರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ.

ಪೊಲೀಸರ ಮಾತಿಗೆ ಕಿವಿಗೊಡದೇ ಮತ್ತೆ ಕಲ್ಲಿನಿಂದ ದಾಳಿ ನಡೆಸಿದಾಗ ಆತರಕ್ಷಣೆಗಾಗಿ ಸಿಪಿಐ ಹಾರಿಸಿದ ಗುಂಡು ಆತನ ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಆರೋಪಿಯು ಭೀಮಾತೀರದ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಆರು ಜನರನ್ನು ಕೊಲೆ ಮಾಡಲು 15 ಲಕ್ಷ ಸುಪಾರಿ ಪಡೆದಿದ್ದ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಬೆಚ್ಚಿಬೀಳಿಸಿದ್ದ ಹತ್ಯಾಕಾಂಡ: ಜಮೀನು ವಿಚಾರಕ್ಕೆ ಆರೋಪಿ ಮಹೇಶ ತಳವಾರ, ಭೀಮಾತೀರದ ಗೋವಿಂದಪುರ ಗ್ರಾಮದ ಚಡಚಣದ ನಿರಾಳೆ ಕುಟುಂಬವೊಂದರ ಮೇಲೆ ದ್ವೇಷ ಸಾಧಿಸುತ್ತಿದ್ದನು. ಕಳೆದ ಮೇ 29ರಂದು ಗೋವಿಂದಪುರ ಗ್ರಾಮದ ಜಮೀನಿನಲ್ಲಿ ನಿರಾಳೆ ಕುಟುಂಬದ ಐದು ಮಂದಿ ಹಾಗೂ ಸ್ಥಳೀಯ ನಿವಾಸಿ ಸೇರಿದಂತೆ 15 ಮಂದಿ ಕೆಲಸ ಮಾಡುತ್ತಿದ್ದರು.

ಒಂದೇ ಜಾಗದಲ್ಲಿ ಕುಟುಂಬದ ಐದು ಮಂದಿ ಇರುವುದನ್ನು ಗಮನಿಸಿದ ಆರೋಪಿ ಮಹೇಶ ಮತ್ತು ಅವನ ಸಹಚರರು ಇದೇ ಸರಿಯಾದ ಸಮಯವೆಂದು ತಿಳಿದು ತನ್ನ ಸಹಚರರೊಂದಿಗೆ ಸೇರಿಕೊಂಡು ಏಕಾಏಕಿ ಲಾಂಗ್, ಮಚ್ಚುಗಳಿಂದ ದಾಳಿ ಮಾಡಿದ್ದು, ಅಲ್ಲದೇ ಬಂದೂಕುಗಳಿಂದ ಗುಂಡು ಹಾರಿಸಿ ಆರು ಮಂದಿಯನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ದಾಳಿ ನಡೆಯುತ್ತಿದ್ದಂತೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ಎದ್ದೆವೋ, ಬಿದ್ದಿವೋ ಎಂಬಂತೆ ಸ್ಥಳದಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಈ ಪ್ರಕರಣ ಭೀಮಾ ತೀರವನ್ನಷ್ಟೇ ಅಲ್ಲದೇ ರಾಜ್ಯದ ಗಮನ ಸೆಳೆದಿತ್ತು. ಅಂದಿನಿಂದ ತಲೆಮರೆಸಿಕೊಂಡು ಅಡ್ಡಾಡುತ್ತಿದ್ದ ಪ್ರಮುಖ ಆರೋಪಿಯನ್ನು ಕೊನೆಗೂ ಪೊಲೀಸರು ತಮ್ಮ ಖೆಡ್ಡಾಗೆ ಬೀಳಿಸಿದ್ದಾರೆ. ಒಟ್ಟಾರೆಯಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 38ಕ್ಕೆ ತಲುಪಿದೆ.