SK Home Ad
Home ನಮ್ಮ ಜಿಲ್ಲೆ ವಿಜಯನಗರ ಉರುಳಿಗೆ ಸಿಲುಕಿ ನರಳುತ್ತಿದ್ದ ಕರಡಿ ಚಿಕಿತ್ಸೆಗೂ ಮುನ್ನವೇ ಸಾವು

ಉರುಳಿಗೆ ಸಿಲುಕಿ ನರಳುತ್ತಿದ್ದ ಕರಡಿ ಚಿಕಿತ್ಸೆಗೂ ಮುನ್ನವೇ ಸಾವು

0
84

ಹೊಸಪೇಟೆ: ಉರುಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಕರಡಿಯೊಂದು ಚಿಕಿತ್ಸೆಗಾಗಿ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಶಿವಪುರ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಶಿವಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಇಟ್ಟಿದ್ದ ಉರುಳಿಗೆ ಕರಡಿಯೊಂದು ಸಿಲುಕಿ ನರಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಹಲಗಪುರ ಸರ್ವೆ ನಂಬರ್‌ 487ರ ವ್ಯಾಪ್ತಿಯಲ್ಲಿ, ತಾಳೆ ಬಸಾಪುರ ತಾಂಡದಿಂದ ಓಬಳಾಪುರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿರುವ ಅರಣ್ಯ ಪ್ರದೇಶಕ್ಕೆ ತೆರಳಿ ಕರಡಿಯನ್ನು ಪತ್ತೆಹಚ್ಚಿದ್ದಾರೆ.

ಕುತ್ತಿಗೆ ಹಾಗೂ ಕಾಲಿಗೆ ಉರುಳು ಬಿಗಿದುಕೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕರಡಿಗೆ ಕಮಲಾಪುರ ಮೃಗಾಲಯದ ಪಶುವೈದ್ಯರ ನೆರವಿನಿಂದ ಅರಿವಳಿಕೆ ನೀಡಿ ಉರುಳಿನಿಂದ ಸುರಕ್ಷಿತವಾಗಿ ಬಿಡಿಸಲಾಯಿತು.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕರಡಿಯನ್ನು ಕಮಲಾಪುರ ಮೃಗಾಲಯಕ್ಕೆ ಸಾಗಿಸುತ್ತಿದ್ದ ವೇಳೆ ಗುಂಡಾ ಟ್ರೀ ಪಾರ್ಕ್‌ ಬಳಿ ಮೃತಪಟ್ಟಿದೆ. ಕರಡಿಗೆ ಉರುಳು ಇಟ್ಟ ಕಿಡಿಗೇಡಿಗಳ ಪತ್ತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.