ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯಲ್ಲಿ ಭಾಗಿಯಾದವರಲ್ಲಿ 2,873 ಮಂದಿ ಕ್ರಿಮಿನಲ್ ಹಿನ್ನೆಲೆಯುಳ್ಳವರು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಮುಖ ಗುರುತಿಸುವಿಕೆ ವ್ಯವಸ್ಥೆ(ಎಫ್‌ಆರ್‌ಎಸ್)ಯಡಿ ಕ್ಯಾಮೆರಾ ಮೂಲಕ ಗುರುತಿಸಲಾದ ವ್ಯಕ್ತಿಗಳಲ್ಲಿ ಹಲವರು ಕೊಲೆ, ದರೋಡೆ, ಅತ್ಯಾಚಾರ ಹಾಗೂ ಶಸ್ತ್ರಾಸ್ತ್ರ ಮತ್ತು ಮಾದಕದ್ರವ್ಯ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆಂದು ಮೂಲಗಳು ವಿವರಿಸಿವೆ.
ಈ 2,873 ವ್ಯಕ್ತಿಗಳ ಪೈಕಿ 989 ಮಂದಿ ಗಂಭೀರ ಅಪರಾಧಗಳಲ್ಲಿ ಭಾಗಿಯಾದ ದಾಖಲೆ ಹೊಂದಿದ್ದಾರೆ. 101 ಮಂದಿ ಕೊಲೆ, 62 ಮಂದಿ ಕೊಲೆ ಯತ್ನ, 284 ಮಂದಿ ದರೋಡೆ, 61 ಮಂದಿ ಅತ್ಯಾಚಾರ, 6 ಮಂದಿ ಪೋಕ್ಸೋ ಕಾಯ್ದೆಯ ಅಪರಾಧಿಗಳು, 25 ಮಂದಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದವರು, 229 ಮಂದಿ ಶಸ್ತ್ರಾಸ್ತ್ರ ಹೊಂದಿದ ಪಾತಕಿಗಳು, 135 ಮಂದಿ ಬಲವಂತ ವಸೂಲಿಗಾರರು, 19 ಮಂದಿ ಅಪಹರಣಕಾರರು, ಮಾದಕದ್ರವ್ಯ ಸಾಗಾಟದಲ್ಲಿ ಸಿಕ್ಕಿಬಿದ್ದ 67 ಕ್ರಿಮಿನಲ್‌ಗಳು ನೀಟ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಗುರುತಿಸಿದ್ದಾರೆ.
ಕೊಲೆ ಪ್ರಕರಣ ದಾಖಲಾದ 101 ಅಪರಾಧಿಗಳಲ್ಲಿ 42 ಮಂದಿ ಎರಡಕ್ಕಿಂತ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿದ್ದರೆ, 12 ಜನರು ಹತ್ತಕ್ಕಿಂತ ಪಾತಕಿ ಕೃತ್ಯಗಳನ್ನು ಎಸಗಿದ್ದಾರೆ. ಕೊಲೆ ಯತ್ನ ವಿಭಾಗದಲ್ಲಿ ದಾಖಲಾದ 62 ಮಂದಿಯಲ್ಲಿ 25 ಜನರ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳಿವೆ. ದರೋಡೆ ವಿಭಾಗದಲ್ಲಿ ದಾಖಲಾಗಿರುವ 284 ಮಂದಿಯಲ್ಲಿ 155 ಜನರು ಎರಡಕ್ಕಿಂತ ಹೆಚ್ಚು ಕ್ರಿಮಿನಲ್ ಕೃತ್ಯ ಎಸಗಿದ್ದಾರೆ.
31 ಜನರ ವಿರುದ್ಧ ಹತ್ತಕ್ಕಿಂತ ಹೆಚ್ಚು ಪ್ರಕರಣಗಳಿವೆ. ಅತ್ಯಾಚಾರದಲ್ಲಿ ಭಾಗಿಯಾದ 61 ಮಂದಿಯಲ್ಲಿ 8 ಜನರ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ. 25 ಮಂದಿ ವಿರುದ್ಧ ಲೈಂಗಿಕ ಕಿರುಕುಳ ಆರೋಪವಿದ್ದು ಅವರಲ್ಲಿ ಆರು ಮಂದಿ ಇಂತಹ ಕೃತ್ಯಗಳನ್ನು ಅನೇಕ ಬಾರಿ ಮಾಡಿದ್ದಾರೆ.



















