“ಅರಣ್ಯದ ನಿಜವಾದ ರಾಯಭಾರಿಗಳು ನೀವೇ” – ದಾಂಡೇಲಿಯಲ್ಲಿ ವನ್ಯಜೀವಿ ಅಭಿಯಾನದಲ್ಲಿ ಗಣೇಶ್‌ರಿಂದ ಪರಿಸರ ಸಂರಕ್ಷಣೆಯ ಸಂದೇಶ
ದಾಂಡೇಲಿ (ಉತ್ತರ ಕನ್ನಡ): ಕನ್ನಡ ಸುದ್ದಿ ಮಾಧ್ಯಮವೊಂದು ಆಯೋಜಿಸಿದ್ದ ಸೀಸನ್–5 ವನ್ಯಜೀವಿ ಅಭಿಯಾನ ಕಾರ್ಯಕ್ರಮವು ದಾಂಡೇಲಿಯ ಹಾರ್ನ್‌ಬಿಲ್ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ ವನ್ಯಜೀವಿ ಅಭಿಯಾನದ ರಾಯಭಾರಿಯಾಗಿ ಭಾಗವಹಿಸಿ ಅರಣ್ಯ ಸಂರಕ್ಷಣೆ ಮತ್ತು ಪರಿಸರ ಜಾಗೃತಿಯ ಮಹತ್ವವನ್ನು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣೇಶ್, ಪ್ರಕೃತಿ ಸೌಂದರ್ಯ, ದಟ್ಟ ಅರಣ್ಯಗಳು ಹಾಗೂ ಸಮೃದ್ಧ ಜೀವ ವೈವಿಧ್ಯತೆಯಿಂದ ಪ್ರಸಿದ್ಧವಾದ ದಾಂಡೇಲಿಗೆ ಆಗಮಿಸಿರುವುದು ವಿಶೇಷ ಸಂತಸ ತಂದಿದೆ ಎಂದು ಹೇಳಿದರು. ಇಲ್ಲಿನ ಪರಿಸರ ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಭಾಗದ ಜನರು ಪ್ರಕೃತಿಯೊಂದಿಗೆ ಹೊಂದಿಕೊಂಡಿರುವ ಜೀವನಶೈಲಿ ದೇಶಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಇದನ್ನೂ ಓದಿ: ಕೇರಳದಲ್ಲಿ ನಿಫಾ ಆತಂಕ : ಸೋಂಕಿತನಿಗೆ ವೆಂಟಿಲೇಟರ್ ಬೆಂಬಲ
ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಅವರು ದಾಂಡೇಲಿ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳ ಕುರಿತು ಸಮಗ್ರ ಮಾಹಿತಿ ನೀಡಿರುವುದರಿಂದ ತಾನು ಹೆಚ್ಚಾಗಿ ಹೇಳುವ ಅಗತ್ಯವಿಲ್ಲ ಎಂದ ಗಣೇಶ್, “ನಾನು ಇಂದು ವನ್ಯಜೀವಿ ಅಭಿಯಾನದ ರಾಯಭಾರಿಯಾಗಿ ಬಂದಿದ್ದೇನೆ. ಆದರೆ ಈ ಅರಣ್ಯ, ಪರಿಸರ ಮತ್ತು ಜೀವ ವೈವಿಧ್ಯತೆಯ ಬಗ್ಗೆ ಇಲ್ಲಿನ ಜನರಿಗೆ ನನಗಿಂತ ಹೆಚ್ಚು ಅರಿವು ಇದೆ. ಆದ್ದರಿಂದ ಈ ಕಾಡಿನ ನಿಜವಾದ ರಾಯಭಾರಿಗಳು ನೀವೇ,” ಎಂದು ಸಭಿಕರನ್ನು ಉದ್ದೇಶಿಸಿ ಹೇಳಿದರು.
ಅರಣ್ಯ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ಉಳಿವಿಗೆ ಜನಸಾಮಾನ್ಯರ ಸಹಭಾಗಿತ್ವ ಅತ್ಯಗತ್ಯ ಎಂದು ಕರೆ ನೀಡಿದರು.
ಇದನ್ನೂ ಓದಿ: ಕೆಮ್ಮಿನ ಸಿರಪ್ ಮೇಲೆ ಕೇಂದ್ರದ ಕಟ್ಟುನಿಟ್ಟಿನ ಕ್ರಮ: ಸಾರ್ವಜನಿಕರಿಗೆ ಏನು ಬದಲಾವಣೆ?
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಗಣೇಶ್, ಪರಿಸರ ಮತ್ತು ಅರಣ್ಯ ಸಂರಕ್ಷಣೆಯ ಬಗ್ಗೆ ಬಾಲ್ಯದಲ್ಲಿಯೇ ಅರಿವು ಮೂಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದರು. ಜೊತೆಗೆ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜೋಯಿಡಾ ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತಿಗೆ ‘ಅತ್ಯುತ್ತಮ ಅರಣ್ಯ ಸ್ನೇಹಿ ಗ್ರಾಮ ಪಂಚಾಯತ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗ್ರಾಮ ಮಟ್ಟದಲ್ಲಿ ಅರಣ್ಯ ಸಂರಕ್ಷಣೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ: NTA ಶಿಫಾರಸಿನ ಮೇರೆಗೆ Telegram ಸೇವೆಗೆ ತಾತ್ಕಾಲಿಕ ನಿರ್ಬಂಧ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಗಣೇಶ್, ತಮ್ಮ ಜನಪ್ರಿಯ ಚಿತ್ರ ‘ಮುಂಗಾರು ಮಳೆ’ ಚಿತ್ರದ “ಅನಿಸುತ್ತಿದೆ ಯಾಕೋ ಇಂದು…” ಹಾಡನ್ನು ಹಾಡಿ ಸಭಿಕರನ್ನು ರಂಜಿಸಿದರು. ಅವರ ಗಾಯನಕ್ಕೆ ಸಭಾಂಗಣ ಕರತಾಡನದಿಂದ ಮೊಳಗಿತು.
ಕಾರ್ಯಕ್ರಮದಲ್ಲಿ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ್ ಸಿಂಧೆ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.






















