ಉಡುಪಿ: “ನಾಡಿನ ಕಬ್ಬು ಬೆಳಗಾರರು ತಾಳ್ಮೆಯಿಂದ ಇರಬೇಕು. ಇದು ಕರ್ನಾಟಕದ ಸಮಸ್ಯೆ ಅಲ್ಲ, ರಾಷ್ಟ್ರದ ಎಲ್ಲಾ ಬೆಳೆಗಾರರ ಸಮಸ್ಯೆ. ಮಹಾರಾಷ್ಟ್ರದ ನಾಯಕರೊಂದಿಗೂ ಕಬ್ಬಿನ ಬೆಲೆ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಕಬ್ಬು ಬೆಳೆಗಾರರಿಗೆ ಮನವಿ ಮಾಡಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಬ್ಬು ಬೆಳೆಗಾರರು ಉಳಿಯಬೇಕು, ಕಾರ್ಖಾನೆಗಳು ಉಳಿಯಬೇಕು. ಇದು ನಮ್ಮ ಧ್ಯೇಯ. ಈ ಬಗ್ಗೆ ಕೇಂದ್ರ ಸರ್ಕಾರದ ಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ಅವರು ಸಭೆ ಕರೆದಿದ್ದಾರೆ. ಈ ಸಲ ಮಳೆ ಇಲ್ಲದೆ ಬೆಳೆ ಕೂಡ ಕಡಿಮೆಯಾಗಿದೆ. ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು” ಎಂದರು.
“ಕಳೆದ 10 ವರ್ಷಗಳಿಂದ ಸಕ್ಕರೆ, ಕಬ್ಬಿನ ಬೆಲೆಯಾಗಲಿ ಜಾಸ್ತಿಯಾಗಿಲ್ಲ. ಕಳೆದ ಸಲ ಸರ್ಕಾರದಿಂದ ಕಬ್ಬಿನ ಬೆಳೆಗಾರರಿಗೆ ನೆರವಾಗುವ ಬಗ್ಗೆ ಘೋಷಣೆ ಮಾಡಿದ್ದೆವು. ಅದನ್ನು ಮುಂದುವರಿಸುತ್ತೇವೆ. ಎಲ್ಲರೂ ಸ್ವಲ್ಪ ತಾಳ್ಮೆಯಿಂದ ಇರಿ. ಈ ಬಗ್ಗೆ ಚರ್ಚೆ ಮಾಡೋಣ” ಎಂದು ಹೇಳಿದರು.
ಎಸ್ಐಆರ್ ಹೋರಾಟದ ಬಗ್ಗೆ ಕೇಳಿದಾಗ, “ಪಕ್ಷ ಭೇದವಿಲ್ಲದೆ ಎಲ್ಲರ ಮತವನ್ನು ಉಳಿಸಬೇಕು. ನಾಡಿನ ಜನತೆಗೆ ಮತದಾನ ಸಂವಿಧಾನ ನೀಡಿರುವ ಹಕ್ಕು. ಅದನ್ನು ರಕ್ಷಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ” ಎಂದು ಹೇಳಿದರು.
“ಕರಾವಳಿ ಪವಿತ್ರವಾದ ಭೂಮಿ. ಪ್ರಯತ್ನ ವಿಫಲವಾದರು ಪ್ರಾರ್ಥನೆ ವಿಫಲವಾಗಲ್ಲ. ಜನರ ಸೇವೆ ಮಾಡಲು, ಜನರ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶ ದೊರೆತಿದೆ. ಮಹಾಲಕ್ಷ್ಮೀ ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸುವುದಕ್ಕೆ ಇಲ್ಲಿಗೆ ಬಂದಿದ್ದೇನೆ” ಎಂದರು.



















