SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಸೋಪ್‌ ಆರ್ಡರ್‌ ಮಾಡಿ 2.97 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಸೋಪ್‌ ಆರ್ಡರ್‌ ಮಾಡಿ 2.97 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

0
77

ಶಿವಮೊಗ್ಗ: ಆನ್‌ಲೈನ್‌ನಲ್ಲಿ ಸೋಪ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು 2.97 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಗಾಂಧಿಬಜಾರ್ ನಿವಾಸಿ 38 ವರ್ಷದ ಎಲೆಕ್ಟ್ರೀಷಿಯನ್ ಈ ವಂಚನೆಗೆ ಒಳಗಾಗಿದ್ದಾರೆ. ಜು. 7ರಂದು ತಮ್ಮ ಮೊಬೈನಲ್ಲಿ ಇನ್ಸ್ಟಾಗ್ರಾಂ ವೀಕ್ಷಿಸುತ್ತಿದ್ದ ವೇಳೆ “ಘರ್ ಸೋಪ್” ಕುರಿತ ಜಾಹೀರಾತು ಗಮನಕ್ಕೆ ಬಂದಿದ್ದು, ಅದನ್ನು ನಂಬಿ ಆನ್‌ಲೈನ್ ಮೂಲಕ ಸೋಪ್‌ಗೆ ಆರ್ಡರ್ ಮಾಡಿದ್ದರು. ಆದರೂ ಸೋಪ್ ಮಾತ್ರ ಮನೆಗೆ ಬರಲೇ ಇಲ್ಲ. ಆಗ ಗೂಗಲ್‌ನಲ್ಲಿ ಕೋರಿಯರ್ ನಂಬರ್ ಹುಡುಕಿ ಕರೆ ಮಾಡಿದ್ದಾರೆ.

ಕೋರಿಯರ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಪಾರ್ಸೆಲ್‌ ಟ್ರ್ಯಾಕ್ ಮಾಡಲು ಒಂದು ಲಿಂಕ್ ಕಳುಹಿಸಿರುವುದಾಗಿ ಹೇಳಿ, ಆ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಸೂಚಿಸಿದ್ದಾನೆ. ಅದರಂತೆ ಎಲೆಕ್ಟ್ರೀಷಿಯನ್ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಅವರ ಮೊಬೈಗೆ ಹಲವು ಸಂದೇಶಗಳು ಬರಲಾರಂಭಿಸಿವೆ. ಅನುಮಾನಗೊಂಡ ಅವರು ಲಿಂಕ್‌ನ್ನು ತಕ್ಷಣವೇ ಡಿಲೀಟ್ ಮಾಡಿದ್ದಾರೆ.

ಆದರೆ ಅಷ್ಟರಲ್ಲೇ ಸೈಬರ್ ವಂಚಕರು ತಮ್ಮ ಕೃತ್ಯವನ್ನು ಎಸಗಿದ್ದರು. ಮಗನ ಶಾಲಾ ಶುಲ್ಕ ಪಾವತಿಸಲು ತೆರಳಿದ ವೇಳೆ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಿದೆ. ತಕ್ಷಣ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ, ಅವರ ಖಾತೆಯಿಂದ ಎರಡು ಬಾರಿ ತಲಾ 1 ಲಕ್ಷ ಹಾಗೂ ಮತ್ತೊಮ್ಮೆ 97 ಸಾವಿರ, ಒಟ್ಟು 2.97 ಲಕ್ಷ ಹಣ ಆನ್ಲೈನ್ ಮೂಲಕ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.