ಬೆಂಗಳೂರು: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ನಲ್ಲಿ ಭಾರತೀಯ ಮೂಲದ ಯುವ ಆಲ್‌ರೌಂಡರ್ ಇರಾ ಏರಿ ಹೊಸ ಭರವಸೆಯಾಗಿ ಕಾಣಿಸಿಕೊಂಡಿದ್ದಾರೆ. ಕೇವಲ 17ನೇ ವಯಸ್ಸಿನಲ್ಲೇ ಆಸ್ಟ್ರೇಲಿಯಾ ಅಂಡರ್-19 ಮಹಿಳಾ ತಂಡದಲ್ಲಿ ಸ್ಥಾನ ಪಡೆದು ಅದ್ಭುತ ಪ್ರದರ್ಶನ ನೀಡುತ್ತಿರುವ ಇರಾ, ಪ್ರಸ್ತುತ ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ಭಾರೀ ಗಮನ ಸೆಳೆಯುತ್ತಿದ್ದಾರೆ. ಆಟದ ಜೊತೆಗೆ ತಮ್ಮ ಆಕರ್ಷಕ ವ್ಯಕ್ತಿತ್ವದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಕ್ರಶ್ ಆಗಿ ನೆಟ್ಟಿಗರ ಮನ ಸೇಳೆದಿದ್ದಾರೆ.
2009 ರ ಫೆಬ್ರವರಿ 25 ರಂದು ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದ ಹೈಡೆಲ್ಬರ್ಗ್‌ನಲ್ಲಿ ಜನಿಸಿದ ಇರಾ, ಅಲ್ಲಿಯೇ ನೆಲೆಸಿರುವ ಭಾರತೀಯ ಮೂಲದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಬಾಲ್ಯದಿಂದಲೇ ಕ್ರಿಕೆಟ್‌ನಲ್ಲಿ ತೀವ್ರ ಆಸಕ್ತಿ ಹೊಂದಿದ್ದು, ವಿಕ್ಟೋರಿಯಾ ವೆಸ್ಟರ್ನ್ ರೀಜನ್ ಜೂನಿಯರ್ ಕ್ರಿಕೆಟ್ ಅಸೋಸಿಯೇಷನ್ ಮೂಲಕ ತಮ್ಮ ಪ್ರಯಾಣ ಆರಂಭಿಸಿದರು. ಸ್ಥಳೀಯ ಕ್ಲಬ್ ಹಾಗೂ ಶಾಲಾ ಮಟ್ಟದ ಟೂರ್ನಿಗಳಲ್ಲಿ ಶಿಸ್ತು ಮತ್ತು ಅತ್ಯುತ್ತಮ ಫಿಟ್‌ನೆಸ್ ಪ್ರದರ್ಶಿಸುವ ಮೂಲಕ ಹಂತ-ಹಂತವಾಗಿ ರಾಜ್ಯ ಮತ್ತು ರಾಷ್ಟ್ರೀಯ ಜೂನಿಯರ್ ತಂಡಕ್ಕೆ ಆಯ್ಕೆಯಾದರು.
ತ್ರಿಕೋನ ಸರಣಿಯಲ್ಲಿ ವಿಕೆಟ್ ಬೇಟೆ: ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಶ್ರೀಲಂಕಾ ಒಳಗೊಂಡ ಅಂಡರ್-19 ತ್ರಿಕೋನ ಸರಣಿಯಲ್ಲಿ ಇರಾ ಅಮೋಘ ಬೌಲಿಂಗ್ ಪ್ರದರ್ಶಿಸಿದ್ದಾರೆ. ಇಡೀ ಟೂರ್ನಮೆಂಟ್‌ನಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒತ್ತಡದ ಸಮಯದಲ್ಲೂ ವಿಕೆಟ್ ಪಡೆಯುವ ಸ್ಥಿರತೆಯು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಸೆಲೆಕ್ಟರ್‌ಗಳ ಗಮನ ಸೆಳೆದಿದೆ.
ಹಾಗೇ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚುವ ಸಾಮರ್ಥ್ಯ ಹೊಂದಿರುವ ಈ ಯುವ ಆಲ್‌ರೌಂಡರ್, ಶೀಘ್ರದಲ್ಲೇ ಆಸ್ಟ್ರೇಲಿಯಾದ ಸೀನಿಯರ್ ಮಹಿಳಾ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಮೂಗುತ್ತಿ ಸುಂದರಿ ಇರಾರನ್ನ, ಆಸೀಸ್ ಸ್ಟಾರ್ ಆಟಗಾರ್ತಿ ಎಲಿಸ್ ಪೆರ್ರಿಗೆ ಹೋಲಿಸಲಾಗುತ್ತಿದ್ದು, ಕ್ರಿಕೆಟ್ ವಿಶ್ಲೇಷಕರು ಮಾತ್ರ ಇರಾ ತಮ್ಮದೇ ಆದ ವಿಶಿಷ್ಟ ಪ್ರತಿಭೆಯಿಂದ ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.






















