Home Advertisement
Home ನಮ್ಮ ಜಿಲ್ಲೆ ಮೈಸೂರು ಸಿಎಂ ಸ್ಥಾನ ಭದ್ರ: 5 ವರ್ಷ ಸಿದ್ದರಾಮಯ್ಯ ಮುಂದುವರೆಯುತ್ತಾರೆ – ಯತೀಂದ್ರ ಸ್ಪಷ್ಟನೆ

ಸಿಎಂ ಸ್ಥಾನ ಭದ್ರ: 5 ವರ್ಷ ಸಿದ್ದರಾಮಯ್ಯ ಮುಂದುವರೆಯುತ್ತಾರೆ – ಯತೀಂದ್ರ ಸ್ಪಷ್ಟನೆ

0
160

ಮೈಸೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನ ಕುರಿತ ಚರ್ಚೆಗಳು, ಸಂಪುಟ ಪುನರ್‌ರಚನೆ ಹಾಗೂ ವಿವಿಧ ಆರೋಪ-ಪ್ರತ್ಯಾರೋಪಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮೈಸೂರಿನಲ್ಲಿ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಸಿಎಂ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ, ಸರ್ಕಾರ ಸಂಪೂರ್ಣ ಸ್ಥಿರವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, “ನಮ್ಮ ತಂದೆಯೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಈ ವಿಷಯವನ್ನು ಖುದ್ದು ಸಿಎಂ ಅಧಿವೇಶನದಲ್ಲೇ ಸ್ಪಷ್ಟಪಡಿಸಿದ್ದಾರೆ. ಅವರ ಮಾತೇ ಅಂತಿಮ” ಎಂದು ತಿಳಿಸಿದ್ದಾರೆ. ಶಾಸಕರು ದೆಹಲಿಗೆ ತೆರಳಿರುವುದು ಸಚಿವ ಸ್ಥಾನ ಆಕಾಂಕ್ಷೆಯಿಂದ, ಅದಕ್ಕೆ ಸಿಎಂ ಸ್ಥಾನಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.

ಸಂಪುಟ ಪುನರ್‌ರಚನೆ ಚರ್ಚೆ : ರಾಜ್ಯದಲ್ಲಿ ಎರಡುವರೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೆಲವು ಶಾಸಕರು ಸಂಪುಟ ಪುನರ್‌ರಚನೆಗೆ ಒತ್ತಾಯಿಸುತ್ತಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. “ಸಂಪುಟ ಪುನರ್‌ರಚನೆ ಆಗಬಹುದು, ಆದರೆ ಯಾವಾಗ ಎನ್ನುವುದು ಹೈಕಮಾಂಡ್ ನಿರ್ಧಾರ” ಎಂದು ತಿಳಿಸಿದ್ದಾರೆ. ತಾವು ಸಚಿವ ಸ್ಥಾನಕ್ಕೆ ಆಕಾಂಕ್ಷಿಯಲ್ಲ, ತಂದೆ ಸಿಎಂ ಆಗಿರುವವರೆಗೆ ಸಚಿವ ಸ್ಥಾನ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು : ಕೇಂದ್ರ ಸಚಿವ ಹೆಚ್‌. ಡಿ. ಕುಮಾರ್‌ಸ್ವಾಮಿ ಅವರು ಮಾಡಿದ್ದ “ವಸೂಲಿ” ಆರೋಪಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಯತೀಂದ್ರ, “ನನ್ನ ಮೇಲೆ ಒಂದು ಸಾಕ್ಷಿ ತೋರಿಸಿ. ಸಾಕ್ಷಿಯಿಲ್ಲದೆ ಆರೋಪ ಮಾಡುವುದು ಸುಲಭ” ಎಂದು ಪ್ರಶ್ನಿಸಿದ್ದಾರೆ. ಎರಡು ವರ್ಷಗಳಿಂದ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

‘ಕುಟುಂಬ ರಾಜಕಾರಣ ಅಲ್ಲ’ ಎಂದ ಯತೀಂದ್ರ : ಕುಟುಂಬ ರಾಜಕಾರಣ ಆರೋಪದ ಕುರಿತು ಮಾತನಾಡಿದ ಅವರು, “ನಾನು ಎಂಎಲ್ಸಿ ಆಗಿರುವುದು ಕುಟುಂಬ ರಾಜಕಾರಣ ಅಲ್ಲ. ನಮ್ಮ ತಂದೆಯ ಅಭಿಮಾನಿಗಳ ರಕ್ಷಣೆ ಹಾಗೂ ಕ್ಷೇತ್ರದ ಜನರ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ” ಎಂದು ಹೇಳಿದ್ದಾರೆ. “ಕುಟುಂಬ ರಾಜಕಾರಣ ಎಂದರೆ ಮಕ್ಕಳನ್ನು ಪಕ್ಷದ ಅಧ್ಯಕ್ಷರನ್ನಾಗಿಸುವುದು, ಶಾಸಕರನ್ನಾಗಿಸುವುದು” ಎಂದು ಅವರು ವ್ಯಾಖ್ಯಾನಿಸಿದ್ದಾರೆ.

MUDA ಪ್ರಕರಣ – ರಾಜಕೀಯ ಪ್ರೇರಿತ? MUDA ಹಗರಣ ಸಂಬಂಧ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ED) ಮೇಲ್ಮನವಿ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ, “ಇದು ರಾಜಕೀಯ ಪ್ರೇರಿತ. ಕೇಂದ್ರದ ಒತ್ತಡದಿಂದ ಮೇಲ್ಮನವಿ ಸಲ್ಲಿಸಲಾಗಿದೆ” ಎಂದು ಆರೋಪಿಸಿದ್ದಾರೆ.

ಉಪಚುನಾವಣೆ ಬಗ್ಗೆ ವಿಶ್ವಾಸ : ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆ ಕುರಿತು ಮಾತನಾಡಿದ ಅವರು, “ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾವು ಬಾಗಲಕೋಟೆಯಲ್ಲಿ ಪ್ರಚಾರ ನಡೆಸಿದ್ದಾಗಿ ತಿಳಿಸಿದರು.