SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಪ್ರಿಯಕರನ ಜತೆ ಜಾಲಿ ಲೈಫ್‌ ಆಸೆಗೆ ಪತಿಯನ್ನೇ ಕೊಂದ ಪತ್ನಿ!

ಪ್ರಿಯಕರನ ಜತೆ ಜಾಲಿ ಲೈಫ್‌ ಆಸೆಗೆ ಪತಿಯನ್ನೇ ಕೊಂದ ಪತ್ನಿ!

0
16

ಬೆಳಗಾವಿ: ಪತಿಯ ಇನ್ಷೂರೆನ್ಸ್ ಪಾಲಿಸಿ ಹಣ ಕಬಳಿಸಿ, ಪ್ರಿಯಕರನೊಂದಿಗೆ ಜಾಲಿ ಲೈಫ್ ಮಾಡುವ ಆಸೆಯಲ್ಲಿ ಆಸ್ಪತ್ರೆಯಲ್ಲಿ ಪತಿಯನ್ನು ಕೊಲೆ ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪತ್ನಿ ಹಾಗೂ ಆಕೆಯ ಪ್ರಿಯಕರ ಯಮಕನಮರಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಯಮಕನಮರಡಿ ಜಾತ್ರೆಯ ಸಂದರ್ಭದಲ್ಲಿ ಮಾಜಿ ಸೈನಿಕ ಸಂದೀಪ್ ಮಾಂಜರೆ ಎಂಬುವರು ಅಪಘಾತಕ್ಕೆ ಸಿಲುಕಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗುತ್ತಿದ್ದ ಪತಿಯನ್ನು ಕಂಡು ಖುಷಿಯಾಗುವ ಬದಲು ತನ್ನ ಅನೈತಿಕ ಸಂಬಂಧಕ್ಕೆ ಈತ ಅಡ್ಡಬರುತ್ತಾನೆ ಎಂಬ ಕಾರಣಕ್ಕೆ ಸಂದೀಪನ ಕತೆ ಮುಗಿಸುವುದಕ್ಕೆ ಪ್ರಿಯಕರನ ಜತೆ ಸೇರಿ ಆತನ ಪತ್ನಿ ಸ್ಕೆಚ್ ಹಾಕಿದ್ದಾಳೆ.

ತಮ್ಮ ಈ ಕುಕೃತ್ಯಕ್ಕೆ ಆಸ್ಪತ್ರೆ ಸಿಬ್ಬಂದಿಯ ನೆರವು ಪಡೆದುಕೊಂಡಿದ್ದಾರೆ. ಸಂದೀಪ ಮಾಜಿ ಸೈನಿಕನಾಗಿರುವುದರಿಂದ ಆತ ಸತ್ತರೆ 2 ಕೋಟಿ ಇನ್ಸೂರೆನ್ಸ್ ಹಣ ಪಡೆಯಬಹುದೆಂದು ಯೋಚಿಸಿ ಸಲೈನ್‌ನಲ್ಲಿ ಕೀಟನಾಶಕ ಬೆರೆಸಿ ದೇಹಕ್ಕೆ ನೀಡಿದ್ದರಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ನಂತರ ಹಣದಾಸೆಗೆ ಆಸ್ಪತ್ರೆಯ ಲ್ಯಾಬ್ ಸಿಬ್ಬಂದಿಯವರು ಕೂಡಾ ಕೀಟನಾಶಕದ ವಿಚಾರ ಹೊರಬರದಂತೆ ನೋಡಿಕೊಂಡಿದ್ದಾರೆ.

ಆದರೆ ಸಂದೀಪ ಮರಣದ ನಂತರ ಆತನ ಪತ್ನಿಯ ವರ್ತನೆ ಸಂಬಂಧಿಕರಿಗೆ ಸಂಶಯ ತಂದಿದೆ. ಹಾಗಾಗಿ ಇದೊಂದು ಪೂರ್ವಯೋಜಿತ ಕೊಲೆ ಎಂದು ಪೊಲೀಸರಿಗೆ ಸಂದೇಹ ವ್ಯಕ್ತಪಡಿಸಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಯಮಕನಮರಡಿ ಸಿಪಿಐ ಜಾವೇದ್ ಮುಷಾಪುರೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿಚಾರಣೆ ನಡೆಸಿದಾಗ ಇದು ಸಹಜ ಸಾವು ಅಲ್ಲ; ಹಣದಾಸೆಗೆ ನಡೆಸಲಾದ ಯೋಜಿತ ಕೊಲೆ ಎಂಬುದು ಸ್ಪಷ್ಟವಾಗಿದೆ. ಇನ್ನಷ್ಟು ಮಾಹಿತಿ ಪಡೆದುಕೊಂಡು ಇವರಿಬ್ಬರ ವಿರುದ್ಧ ಕೇಸು ದಾಖಲಿಸಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ.