ಕೊಪ್ಪಳ: ರಾಜ್ಯದ ಸಿಎಂ ಸ್ಥಾನ ಬದಲಾವಣೆಯ ಚರ್ಚೆಯ ಗೊಂದಲ ನಿಲ್ಲಬೇಕು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರೇ ಮುಂದುವರೆಯಬೇಕು. ಇಲ್ಲವಾದರೆ ನೀವೇ ಸಿಎಂ ಆಗಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಹೇಳಿದ್ದೇನೆ ಎಂದು ಸಿಎಂ ಆರ್ಥಿಕ ಸಲಹೆಗಾರ, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆಯವರು 50 ವರ್ಷದಿಂದ ರಾಜ್ಯವನ್ನು ಅಭಿವೃದ್ಧಿ ಮಾಡಿದ ಚಿಂತಕರು. ಹಾಗಾಗಿ ನೀವೇ ಸಿಎಂ ಆಗುವಂತೆ ಹೇಳಿದ್ದೇನೆ. ಆಗ ಖರ್ಗೆಯವರು ನಾನು 2008ರಲ್ಲಿಯೇ ಮುಖ್ಯಮಂತ್ರಿ ಆಗಬೇಕಿತ್ತು. ಧರ್ಮಸಿಂಗ್, ಆರ್.ವಿ. ದೇಶಪಾಂಡೆ ಸೇರಿ ಹಿರಿಯರೆಲ್ಲರೂ ಸೋತರು. ಹಾಗಾಗಿ ಕಡಿಮೆ ಸೀಟು ಬಂದವು. ಇದರಿಂದ ಸಿಎಂ ಆಗಲಿಲ್ಲವೆಂದು ತಿಳಿಸಿದರು ಎಂದರು.
25 ಮಂತ್ರಿಗಳನ್ನು ತೆಗೆದು ಬೇರೆಯವರನ್ನು ಮಾಡಿ ಎಂದಿದ್ದೇನೆ. ಹಿರಿಯರು ಮತ್ತು ಹೊಸಬರನ್ನು ಮಾಡಿ ಎಂದಿದ್ದೇವೆ. ಮುಖ್ಯಮಂತ್ರಿ ಸ್ಥಾನದಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ ಎಂದುಕೊಂಡಿದ್ದೇನೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರೆ ಮುಂದೆ ನೋಡೋಣ ಎಂದರು.
ಇವರೆಗೂ ದಲಿತರು ಸಿಎಂ ಆಗಿಲ್ಲ ಮುಂದೆ ಆದರೆ ತಪ್ಪಲ್ಲ. ಖರ್ಗೆಯವರು ಪ್ರಧಾನಿ ಆಗಬಹುದಿತ್ತು. ಬಿಜೆಪಿಯವರು 400 ಬರುತ್ತವೆ ಎನ್ನುತ್ತಿದ್ದರು. ಆದರೆ, 240ಕ್ಕೆ ನಿಂತರು. ಸ್ವಲ್ಪ ವ್ಯಾತ್ಯಾಸವಾಗಿದ್ದರೂ, ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ನನಗೂ ಪ್ರಧಾನಿ ಆಗಬೇಕು ಎಂಬ ಆಸೆ ಇದೆ ಎಂದು ಹೇಳಿದರು.





















