SK Home Ad
Home ನಮ್ಮ ಜಿಲ್ಲೆ ಡಿಸಿ ಕಚೇರಿಗೆ ಮುತ್ತಿಗೆ, ಕೋರ್ಟ್ ಹಾಲ್‌ನಲ್ಲೇ ಧರಣಿ: ಹಾವೇರಿಯಲ್ಲಿ ರೈತರ ಹೈಡ್ರಾಮಾ

ಡಿಸಿ ಕಚೇರಿಗೆ ಮುತ್ತಿಗೆ, ಕೋರ್ಟ್ ಹಾಲ್‌ನಲ್ಲೇ ಧರಣಿ: ಹಾವೇರಿಯಲ್ಲಿ ರೈತರ ಹೈಡ್ರಾಮಾ

0
40

ಹಾವೇರಿ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿತು.

ಪ್ರತಿ ಟನ್ ಕಬ್ಬಿಗೆ 3,600 ದರ ನೀಡಲೇಬೇಕು ಎಂಬ ರೈತರ ಪಟ್ಟು ಹಾಗೂ 3,100 ರೂ. 3,150ಕ್ಕಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂಬ ಸಕ್ಕರೆ ಕಾರ್ಖಾನೆ ಮಾಲೀಕರ ನಿಲುವಿನ ನಡುವೆ ನಡೆದ ಸಂಧಾನ ಸಭೆ ತಡರಾತ್ರಿವರೆಗೂ ಯಾವುದೇ ನಿರ್ಧಾರಕ್ಕೆ ಬರದೆ ಕಗ್ಗಂಟಾಯಿತು.

ಮಧ್ಯಾಹ್ನದಿಂದ ಸಂಜೆವರೆಗೂ ಕಾಯ್ದ ಸುಸ್ತಾದ ಕಬ್ಬು ಬೆಳೆಗಾರರು ಆಕ್ರೋಶಗೊಂಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಗೇಟ್ ಹಾರಿ ಒಳನುಗ್ಗಿ ಪ್ರತಿಭಟನೆ ನಡೆಸಿದರು. ಕಚೇರಿಯ ಮುಖ್ಯದ್ವಾರ ಬಂದ್ ಮಾಡಿ ಅಧಿಕಾರಿಗಳ ಸಂಚಾರಕ್ಕೂ ಅಡ್ಡಿಪಡಿಸಿದರು. ಮತ್ತೊಂದೆಡೆ, ಸಭೆ ನಡೆಯುತ್ತಿದ್ದ ಕೋರ್ಟ್ ಹಾಲ್‌ನಲ್ಲಿಯೇ ಚಾಪೆ ಹಾಸಿ ಧರಣಿ ಆರಂಭಿಸಿದ ರೈತರು, ದರ ಘೋಷಣೆ ಆಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ರಾತ್ರಿವರೆಗೂ ಸಭೆ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಮಹತ್ವದ ಸಂಧಾನ ಸಭೆ ಆರಂಭವಾಯಿತು. ಸಭೆಯಲ್ಲಿ ಜಿಎಂ ಶುಗರ್ಸ್‌ ಕಾರ್ಯನಿರ್ವಾಹಕ ವ್ಯವಸ್ಥಾಪಕ ಬಸವರಾಜ್, ವಿಐಎಂಪಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಹೆಬ್ಬಾರ್ ಸೇರಿದಂತೆ ಕಾರ್ಖಾನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ರೈತ ಮುಖಂಡ ಚೂನಪ್ಪ ಪೂಜೇರಿ ನೇತೃತ್ವದಲ್ಲಿ 36 ರೈತರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹಾಗೂ ಎಸ್ಪಿ ಯಶೋಧಾ ವಂಟಗೋಡಿ ಸಭೆಯಲ್ಲಿದ್ದರು.

ಸಚಿವರ ಆಗಮನ: ಸಭೆ ನಡೆಯುತ್ತಿದ್ದ ಮಧ್ಯೆಯೇ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಆಗಮಿಸಿ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ರೈತರ ಬೇಡಿಕೆ ಹಾಗೂ ಕಾರ್ಖಾನೆಗಳ ನಿಲುವಿನ ಕುರಿತು ಸುದೀರ್ಘ ಚರ್ಚೆ ನಡೆಯಿತು. ಆದರೆ, ದರ ನಿಗದಿ ವಿಚಾರದಲ್ಲಿ ಉಭಯ ಕಡೆಯವರ ನಡುವೆ ಒಮ್ಮತ ಮೂಡಲಿಲ್ಲ. ರೈತರು ಪ್ರತಿ ಟನ್‌ಗೆ 3,600ರೂ. ನೀಡಬೇಕು ಎಂದು ಪಟ್ಟು ಹಿಡಿದರೆ, ಜಿಎಂ ಶುಗರ್ಸ್ ಕಾರ್ಖಾನೆಯವರು 3,100 ಹಾಗೂ ವಿಐಎಂಪಿ ಕಾರ್ಖಾನೆಯವರು 3,150 ನೀಡುವುದಾಗಿ ತಿಳಿಸಿದವು. ಇದಕ್ಕಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದು ಕಾರ್ಖಾನೆಗಳ ಪ್ರತಿನಿಧಿಗಳು ಸ್ಪಷ್ಟಪಡಿಸಿದರು.