ಕಲಬುರಗಿ: ತಾವು ಈಗಲೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ, ಶೀಘ್ರ ನಡೆಯಲಿರುವ 2ನೇ ಹಂತದ ಸಂಪುಟ ವಿಸ್ತರಣೆಯಲ್ಲಿ ತಮಗೆ ಮಂತ್ರಿ ಪದವಿ ಸಿಗುವ ವಿಶ್ವಾಸವಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಕಲಬುರಗಿ ಸಂಚಾರದಲ್ಲಿರುವ ಅವರು ಗಾಣಗಾಪುರ ದತ್ತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಕಲಬುರಗಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿಂದಿ ಶಾಯರಿ ಉದಾಹರಿಸುತ್ತ ಬದುಕಿರೋವರೆಗೂ ಸಂಘರ್ಷ ಇದ್ದದ್ದೇ, ಹೀಗಾಗಿ ಯಾವುದಕ್ಕೂ ಆತುರ ಪಡೋದಿಲ್ಲ. ತಾಳ್ಮೆಯಿಂದ ಕಾಯುತ್ತೇನೆ, ವಿಳಂಬವಾದರೂ ಅತ್ಯುತ್ತಮವಾದದ್ದೇ ತಮಗೆ ದೊರಕುವ ಆತ್ಮವಿಶ್ವಾಸ ತಮಗಿರೋದಾಗಿ ಡಾ. ಅಜಯ್ ಸಿಂಗ್ ಹೇಳಿದರು.
ಮೂರು ಬಾರಿ ಶಾಸಕನಾಗಿದ್ದೇನೆ. ಮಂತ್ರಿಗಿರಿಗಾಗಿ 14 ವರ್ಷ ಕಾದಿದ್ದೇನೆ, ಇನ್ನು 15, 20 ದಿನ ತಾಳ್ಮೆಯಿಂದ ಕಾಯೋಣ, ಹೈಕಮಂಡ್ ನನ್ನ ಪಕ್ಷ ನಿಷ್ಠೆ, ಕೆಲಸಗಳನ್ನು ಗುರುತಿಸಿದೆ. ಸಚಿವ ಸ್ಥಾನ ಕೊಟ್ಟೇ ಕೊಡುತ್ತಾರೆಂಬ ವಿಶ್ವಾಸ ತಮಗಿದೆ. ಈಗ ಸಿಎಂ, ಡಿಸಿಎಂ ಸೇರಿದಂತೆ 13 ಜನ ಸಚಿವರಾಗಿದ್ದಾರೆ. ಇನ್ನೂ 20 ಸ್ಥಾನಗಳಿವೆ. ಇದರಲ್ಲಿ ನನಗೂ ಅವಕಾಶ ಸಿಗಲಿದೆ, ಅದಕ್ಕಾಗಿ ತಾಳ್ಮೆಯಿಂದ ಕಾಯುತ್ತಿರುವೆ ಎಂದರು.
ನಾನು 2018ರಲ್ಲೂ ಸಚಿವ ಸ್ಥಾನದ ಆಕಾಂಕ್ಷಿಯಿದ್ದೆ, 2023ರಲ್ಲೂ ನಾನು ಸಚಿವ ಸ್ಥಾನದ ಆಕಾಂಕ್ಷಿ ಇದ್ದೆ, ಸಿದ್ದರಾಮಯ್ಯ ಸರ್ಕಾರದಲ್ಲಿನ ಸಂಪುಟ ರಚನೆಯ ಸಂದರ್ಭದಲ್ಲೂ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದೆ, ಡಿಕೆಶಿ ಸಂಪುಟದಲ್ಲಿಯೂ ನಾನು ಈಗಲೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಇದ್ದೇನೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ನಾನು ಕೆಕೆಆರ್‌ಡಿಬಿ ಅಧ್ಯಕ್ಷನಾಗಿ ಮುಖ್ಯಸಚೇತಕನಾಗಿ, ದೆಹಲಿಯಲ್ಲಿ ವಿಶೇಷ ಪ್ರತಿನಿಧಿಯಾಗಿ ಹೇಗೆ ಕೆಲಸ ಮಾಡಿದ್ದೇನೆ ಎನ್ನುವುದು ನಮ್ಮ ಹೈಕಮಾಂಡ್ ಹತ್ತಿರದಿಂದ ನೋಡಿದೆ. ಈಗಲೂ ನಾನು ನೂರಕ್ಕೆ ನೂರರಷ್ಟು ಸಚಿವ ಸ್ಥಾನದ ಆಕಾಂಕ್ಷಿ ಇದ್ದೇನೆ. ದೇರ್ ಹುವಾ ಲೇಕಿನ್ ದುರಸ್ತ ಹುವಾ ಅನ್ನೋ ಮಾತಿನಂತೆ ತಡವಾಗಿಯಾದರೂ ಪರವಾಗಿಲ್ಲ, ಹೈಕಮಾಂಡ್ ನನಗೆ ಈ ಬಾರಿ ಸಚಿವ ಸ್ಥಾನ ನೀಡಲಿದೆ ಎಂದರು.
ಮಂತ್ರಿ ಸ್ಥಾನ ನೀಡುವುದಾಗಿ ಪಕ್ಷದವರು ನಮಗೆ ಭರವಸೆ ನೀಡಿದ್ದಾರೆ. ಹಾಗಾಗಿ ನನಗೆ ಮಂತ್ರಿಸ್ಥಾನ ನೀಡುತ್ತಾರೆ ಅಂತ ಸಂಪೂರ್ಣ ವಿಶ್ವಾಸ ಇದೆ. ಹೀಗಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರದಲ್ಲಿ ಸಂಪುಟ ಸೇರುವೆ ಎನ್ನುವ ಬಗ್ಗೆ ಸಂಪೂರ್ಣ ವಿಶ್ವಾಸ ಇದೆ ಎಂದರು.
ಕಲಬುರಗಿ ಜಿಲ್ಲೆಯಿಂದ ಈಗಾಗಲೇ ಇಬ್ಬರಿಗೆ ಸಚಿವ ಸ್ಥಾನ ಮೊದಲ ಪಟ್ಟಿಯಲ್ಲಿ ಕೊಟ್ಟರೂ ಕೂಡಾ 2009 ರಲ್ಲಿನ ಎಸ್.ಎಂ. ಕಷ್ಣ ಸಂಪುಟದಲ್ಲಿ ಕಲಬುರಗಿಗೆ 7 ಜನ ಸಚಿವರಿದ್ದರು. ಅದರಂತೆ ಹೈಕಮಾಂಡ್ ಮನಸ್ಸು ಮಾಡಿದಲ್ಲಿ ಹೆಚ್ಚಿನ ಸಚಿವ ಸ್ಥಾನ ಜಿಲ್ಲೆಗೆ ನೀಡಲು ಯಾವುದೇ ತಂದರೆ ಇಲ್ಲ ಎಂದರು.
ಕೃಷ್ಣ ಸಂಪುಟದಲ್ಲಿ ದಿ. ಧರಂಸಿಂಗ್, ಡಾ. ಖರ್ಗೆ, ಡಾ. ಮಾಲಕರೆಡ್ಡಿ, ಖಮರೂಲ್ ಇಸ್ಲಾಂ, ಬಾಬೂರಾವ ವ್ಹಾಣ್, ಬಾಬೂರಾವ ಚಿಂಚನ್‌ಸೂರ್ ಸಚಿವರಾಗಿದ್ದರೆಂಬ ಸಂಗತಿ ಮೆಲಕು ಹಾಕಿದ. ಅಜಯ್ ಸಿಂಗ್ ಸಂಖ್ಯೆ ಮುಖ್ಯವಲ್ಲ, ಯಾರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬುದು ಹೈಕಮಾಂಡ್ ನಿರ್ಣಯ ಮಾಡುತ್ತದೆ, ಅದರಂತೆಯೇ ನನಗೆ ಸಚಿವ ಪಟ್ಟ ಸಿಗುವ ವಿಶ್ವಾಸ ಇದೆ ಎಂದರು.
ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಾ. ಅಜಯ್ ಸಿಂಗ್ ಮೋದಿ ಸರ್ಕಾರ ವಿಪಕ್ಷಗಳನ್ನು ಮುಗಿಸಲು ಹೊರಟಿದೆ. ವಿಪಕ್ಷಗಳು, ಪ್ರಾದೇಶಿಕ ಪಕ್ಷಗಳ ಮಲೆ ಪ್ರಹಾರ ಮಾಡುತ್ತಿದೆ. ಇಡಿ, ಐಟಿ, ಎಲೆಕ್ಷನ್ ಕಮೀಶನ್ ಬಳಸಿ ವಿಪಕ್ಷಗಳನ್ನು ಹತ್ತಿಕ್ಕುತ್ತಿರೋದನ್ನ ನಾವು ಪ. ಬಂಗಾಳ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವುಕಡೆ ಕಂಡಿದ್ದೇವೆ. ಮೋದಿ ಸರ್ಕಾರಕ್ಕೆ ವಿಪಕ್ಷಗಲೇ ಬೇಡ. ಪ್ರಜಾಪ್ರಭುತ್ವದಲ್ಲಿ ಅವರಿಗೆ ನಂಬಿಕೆಯೇ ಇಲ್ಲವೆಂದು ಡಾ. ಅಜಯ್‌ಸಿಂಗ್ ತಿವಿದರು.






















