BBK13: ಬಿಗ್‌ಬಾಸ್ ಕನ್ನಡದ ಪ್ರಸಕ್ತ ಸೀಸನ್ ಆರಂಭದಲ್ಲೇ ಗಲಾಟೆ, ವಾಗ್ವಾದಗಳು ಕಾವು ಪಡೆದುಕೊಂಡಿವೆ. ಈ ಸೀಸನ್‌ನ ಮೊದಲ ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡಿದ್ದ ಸ್ಪರ್ಧಿ ಆಸಿಯಾ ಫಿರ್ದೋಸ್, ಇದೀಗ ಸಹ-ಸ್ಪರ್ಧಿಗಳಾದ ಲಿಖಿತ್ ಮತ್ತು ‘ಮಾಡರ್ನ್ ಮಹಾಕವಿ’ ಮಂಜ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಮನೆಯಿಂದ ಹೊರಬಿದ್ದರೂ ಪರವಾಗಿಲ್ಲ, ಇಬ್ಬರನ್ನೂ ಹೊಡೆದೇ ಹೋಗುತ್ತೇನೆ” ಎಂದು ನೇರವಾಗಿಯೇ ಸವಾಲು ಹಾಕಿದ್ದಾರೆ.
ಹೌದು.. ಡೈನಿಂಗ್ ಹಾಲ್‌ನಲ್ಲಿ ಕುಳಿತಿದ್ದ ಆಸಿಯಾರನ್ನು ನೋಡಿ, ಮನೆಯ ಪ್ರಧಾನ ಬಾಗಿಲ ಬಳಿ ನಿಂತಿದ್ದ ಲಿಖಿತ್ ಮುಖ ತಿರುಗಿಸುತ್ತಾ ಅಣುಕಿಸಲು ಶುರು ಮಾಡಿದ್ದಾರೆ. ಲಿಖಿತ್ ಈ ಅಸಭ್ಯ ವರ್ತನೆಯನ್ನು ಕಂಡು ಕೆರಳಿದ ಆಸಿಯಾ, “ಮಂಗನ ತರ ಕಾಣಿಸ್ತೀಯಾ” ಎಂದು ಗರಂ ಆಗಿದ್ದಾರೆ. ಆದ್ರೂ ಲಿಖಿತ್ ತಮ್ಮ ವ್ಯಂಗ್ಯವನ್ನು ಮುಂದುವರಿಸಿದಾಗ, ಕುಳಿತ ಜಾಗದಿಂದ ಎದ್ದು ಬಂದ ಆಸಿಯಾ “ಬಾಯಿ ಮುಚ್ಚಿಕೊಂಡು ಇರು” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಜಗಳ ನಡೆಯುತ್ತಿದ್ದ ವೇಳೆ ಜೈಲಿನಲ್ಲಿದ್ದ ‘ಮಾಡರ್ನ್ ಮಹಾಕವಿ’ ಮಂಜ, ಸೀಟಿ ಹೊಡೆಯುತ್ತಾ ಲಿಖಿತ್‌ಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಆಸಿಯಾ, ಮಂಜ ವಿರುದ್ಧವೂ ಹಾಯ್ದುಬಿದ್ದು “ಮುಚ್ಚಿಕೊಂಡು ಕೂತ್ಕೊಳ್ಳೋ” ಎಂದು ಗದರಿದ್ದಾರೆ. ಮಂಜ ‘ಅಳುಮುಂಜಿ’ ಎಂದು ರೇಗಿಸಿದಾಗ ಪರಿಸ್ಥಿತಿ ಕೈಮೀರಿದೆ.
ಕೊನೆಗೆ ಸಹನೆ ಕಳೆದುಕೊಂಡ ಆಸಿಯಾ, ಇಬ್ಬರಿಗೂ ಚಿಟಕಿ ಹೊಡೆಯುತ್ತಾ “ಈ ಮನೆಯಿಂದ ಹೊರಗೆ ಹೋದರೂ ಚಿಂತೆಯಿಲ್ಲ, ಇಬ್ಬರೂ ಹುಡುಗರನ್ನು ಹೊಡೆದೇ ಹೋಗುತ್ತೇನೆ” ಎಂದು ರೌದ್ರರೂಪದಲ್ಲೇ ಹೆದರಿಸಿದ್ದಾರೆ.
ಸದ್ಯ ಈ ರೋಚಕ ಘಟನೆಯ ಪ್ರೋಮೋವು ಕಲರ್ಸ್ ಕನ್ನಡದ ಅಧೀಕೃತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.






















