ಗದಗ: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ಮೇಲ್ನೋಟಕ್ಕೆ ಬಹಳ ಸುಗಮವಾಗಿ ಆಯಿತು ಎನ್ನುವಂತೆ ಕಾಣಿಸುತ್ತಿದೆ. ಆದರೆ, ಒಳ ಬೇಗುದಿ ಇನ್ನೂ ಕೆಂಡದಂತೆ ಜೀವಂತ ಆಗಿದೆ. ಇನ್ನೂ ಎರಡು ವರ್ಷ ರಾಜಕೀಯ ಅಸ್ಥಿರತೆ, ಅಸಮಾಧಾನ, ಆಡಳಿತ ಕುಸಿದು ಹೋಗುತ್ತದೆ. ಕಾಂಗ್ರೆಸ್ ಪಕ್ಷದ ಸಂಘರ್ಷಾತ್ಮಕ ರಾಜಕಾರಣದಲ್ಲಿ ಸಾಮಾನ್ಯ ಜನರ ಬದುಕು ದುಸ್ತರವಾಗುವುದು ಸ್ಪಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ಮೇಲ್ನೋಟಕ್ಕೆ ಬಹಳ ಸುಗಮವಾಗಿ ಆಯಿತು ಎನ್ನುವಂತೆ ಕಾಣಿಸುತ್ತಿದೆ. ಆದರೆ, ಒಳ ಬೇಗುದಿ ಇನ್ನೂ ಕೆಂಡದಂತೆ ಜೀವಂತ ಆಗಿದೆ. ಅದರ ಲಕ್ಷಣಗಳೇ ಖಾತೆ ಗೊಂದಲ ನಡೆಯುತ್ತಿದೆ. ಎರಡನೇಯದಾಗಿ ಸಿದ್ದರಾಮಯ್ಯ ನಾಯಕತ್ವ ಒಪ್ಪಿಕೊಂಡಂತೆ ಕಾಂಗ್ರೆಸ್‌ನ ಶಾಸಕರು, ಮಂತ್ರಿಗಳು ಡಿ.ಕೆ. ಶಿವಕುಮಾರ್ ಅವರನ್ನು ಒಪ್ಪಿಕೊಂಡಿಲ್ಲ. ಮೂರನೇಯದ್ದು ಸಚಿವರಾಗಲು ಯಾಕೆ ಇಷ್ಟೊಂದು ಒತ್ತಡ ಇದೆ. ಯಾಕೆಂದರೆ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಶಾಸಕರಿಗೆ ಗೊತ್ತಾಗಿದೆ. ಹೀಗಾಗಿ ಈಗಲೇ ಮಂತ್ರಿ ಆಗಬೇಕೆಂದು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಬಹಳ ಸವಾಲುಗಳಿವೆ. ರಾಜಕೀಯವಾಗಿ ಸ್ಥಿರವಾಗಿದ್ದರೆ ಮಾತ್ರ ಒಳ್ಳೆಯ ಆಡಳಿತ ಕೊಡಲು ಸಾಧ್ಯ. ಈ ಸವಾಲನ್ನು ಶಿವಕುಮಾರ ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
ಡಿ.ಕೆ. ಶಿವಕುಮಾರ್ ಅವರನ್ನು ಟ್ರಬಲ್ ಶೂಟರ್ ಅಂತ ಕರೆಯುತ್ತಾರೆ. ಈಗ ಆಗಿರುವ ಟ್ರಬಲ್‌ಗೆ ಬೇರೆ ಯಾರೂ ಶೂಟರ್ ಇಲ್ಲ. ಅವರು ಇದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಮುಂದಿನ ರಾಜಕೀಯ ಇದೆ. ಇನ್ನು ಎರಡು ವರ್ಷ ರಾಜಕೀಯ ಅಸ್ಥಿರತೆ, ಅಸಮಾಧಾನ, ಆಡಳಿತ ಕುಸಿದು ಹೋಗುವುದು, ಒಟ್ಟಾರೆ ಈ ಕಾಂಗ್ರೆಸ್ ಪಕ್ಷದ ಸಂಘರ್ಷಾತ್ಮಕ ರಾಜಕಾರಣದಲ್ಲಿ ಸಾಮಾನ್ಯ ಜನರ ಬದುಕು ದುಸ್ತರವಾಗುವುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಸುಮ್ನೆ ಕುಳಿತಿಲ್ಲ: ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುಮ್ಮನೆ ಕೂಡುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಇನ್ನೂ ಸುಮ್ನೆ ಕುಳಿತಿಲ್ಲ. ಮೊದಲ ಹಂತದ ಸಚಿವ ಸಂಪುಟದಲ್ಲಿ ಯಾರ ಪ್ರಭಾವ ಕಾಣುತ್ತಿದೆ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಹೈಕಮಾಂಡ ಪ್ರಭಾವ ಮಾತ್ರ ಕಾಣಿಸುತ್ತಿದೆ. ಮುಂದಿನ ಕಂತಿನಲ್ಲಿ ಡಿ.ಕೆ. ಶಿವಕುಮಾರ ನಂಬಿದವರನ್ನು ಮಂತ್ರಿ ಮಾಡಿದರೆ ಅವರ ಛಾಪು ಇದೆ ಎನ್ನಬಹುದು. ಇಲ್ಲವಾದರೆ ಡಿಕೆಶಿ ಛಾಪು ಇಲ್ಲ ಅಂತ ಅರ್ಥ ಎಂದು ಹೇಳಿದರು.
ಸುರ್ಜೆವಾಲಾ ಜಾಣ ಮರೆವು: ಮಾಜಿ ಪ್ರಧಾನಿ ದೇವೇಗೌಡರಿಗೆ ರಾಜ್ಯಸಭಾ ಸ್ಥಾನ ನೀಡದೇ ಬಿಜೆಪಿ ಅಪಮಾನ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುರ್ಜೆವಾಲ ಅವರಿಗೆ ಕರ್ನಾಟಕದ ರಾಜಕೀಯ ಗೊತ್ತಿಲ್ಲ. ಮತ್ತು ಜಾಣ ಮರೆವು ಇದೆ. ದೇವೇಗೌಡರನ್ನು ಪ್ರಧಾನ ಮಂತ್ರಿ ಸ್ಥಾನದಿಂದ ಇಳಿಸಿದ್ದು ಕಾಂಗ್ರೆಸ್ ಅದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ. ಎರಡು ಬಾರಿ ಕುಮಾರಸ್ವಾಮಿ ಜೊತೆ ಸರ್ಕಾರ ಮಾಡಿ ಅವರಿಗೆ ಕೈಕೊಟ್ಟಿರುವುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಕುಮಾರಸ್ವಾಮಿಯವರು ಉತ್ತರ ಕೊಟ್ಟಿದ್ದಾರೆ. ದೇವೇಗೌಡರ ಬಗ್ಗೆ ಬಿಜೆಪಿ ಹೈಕಮಾಂಡ್ ಚಿಂತನೆ ಮಾಡುತ್ತಿದೆ. ಖಂಡಿತವಾಗಿಯೂ ಅವರಿಗೆ ಯಾವ ಸಂದರ್ಭದಲ್ಲಿ ಗೌರವ ಸ್ಥಾನ ಕೊಡಬೇಕೊ ಅದನ್ನು ಮಾಡುತ್ತಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ತೆರಿಕೆ ಕಡಿಮೆ ಮಾಡಲಿ: ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,
ಇನ್ನೂ ಎರಡು ವಾರದಲ್ಲಿ ಯುದ್ಧ ಮುಗಿಯಲಿದೆ ಎಲ್ಲವೂ ಸರಿಯಾಗಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬಿಕ್ಕಟ್ಟು ಉಂಟಾಗಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಕಡಿತ ಮಾಡಿ ದರ ಇಳಿಸಬೇಕು ನಾನು ಸಿಎಂ ಆಗಿದ್ದಾಗ 7 ರೂಪಾಯಿ ಕಡಿತ ಮಾಡಿದ್ದೇ. ಅದೇ ರೀತಿ ರಾಜ್ಯ ಸರ್ಕಾರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಸರ್ಕಾರ ನೈಯಾಪೈಸೆ ಕಡಿಮೆ ಮಾಡಿಲ್ಲ. ಅದರ ಬದಲು ತೆರಿಗೆ ಹೆಚ್ಚಳ ಮಾಡಿದ್ದಾರೆ. ಅವರು ಬೇರೆಯವರ ಮೇಲೆ ಬೊಟ್ಟು ಮಾಡಿ ತೋರಿಸುತ್ತಾರೆ. ದೇಶದಲ್ಲಿ ಪೆಟ್ರೋಲ್, ಡಿಸೇಲ್ ಮೇಲೆ ಅತೀ ಹೆಚ್ಚು ತೆರಿಗೆ ರಾಜ್ಯ ಸರ್ಕಾರ ಹಾಕುತ್ತಿದೆ. ಅದನ್ನು ಕಡಿಮೆ ಮಾಡಿದರೆ ಜನರಿಗೆ ಅನಕೂಲ ಆಗುತ್ತದೆ. ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಇದೆ ಅದನ್ನು ಒಪ್ಪಿಕೊಳ್ಳುವುದಿಲ್ಲ. ಜನರ ಬಗ್ಗೆ ಕಳಕಳಿ ಇದ್ದರೆ ರಾಜ್ಯದ ಪಾಲಿನ ತೆರಿಗೆ ಕಡಿಮೆ ಮಾಡುತ್ತಾರೆ ಎಂದು ಹೇಳಿದರು.






















