SK Home Ad
Home ನಮ್ಮ ಜಿಲ್ಲೆ ಗದಗ ಬರ ಪರಿಸ್ಥಿತಿ ಸಭೆಯಲ್ಲಿ ಕಣ್ಣೀರಿಟ್ಟ ಅಧಿಕಾರಿ!

ಬರ ಪರಿಸ್ಥಿತಿ ಸಭೆಯಲ್ಲಿ ಕಣ್ಣೀರಿಟ್ಟ ಅಧಿಕಾರಿ!

0
7

ಗದಗ: ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಶುಕ್ರವಾರ ನಡೆಸಿದ ಪರಿಶೀಲನಾ ಸಭೆಯಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಅವರು ಕೇಳಿದ ಪ್ರಶ್ನೆಗಳಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಅಸಮರ್ಪಕ ಉತ್ತರ ನೀಡಿದ್ದಕ್ಕಾಗಿ ಸಚಿವ ರಾಯರೆಡ್ಡಿ ‘ಇನ್‌ಎಫಿಷಿಯಂಟ್ ಆಫೀಸರ್’ ಎಂದು ಹಿಗ್ಗಾ ಮುಗ್ಗಾ ಝಾಡಿಸಿ ಅಧಿಕಾರಿ ನೀರಿಳಿಸಿದ ಘಟನೆ ಜರುಗಿತು.

ಸಚಿವ ಬಸವರಾಜ ರಾಯರೆಡ್ಡಿ, ನೂರಾರು ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ನೀವು ಅಸಮರ್ಥ ಅಧಿಕಾರಿಯಾಗಿದ್ದೀರಿ. ನಿಮಗೆ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದ್ದರೆ ಬೇರೆ ಕಡೆ ವರ್ಗಾವಣೆ ಪಡೆದುಕೊಂಡು ಹೋಗಿ ಬಿಡಮ್ಮ. ನನಗೆ ಇಂತಹ ಅಸಮರ್ಥ ಅಧಿಕಾರಿಗಳಿಂದ ಉತ್ತಮ ಕೆಲಸ ನಿರ್ವಹಿಸಲು ಆಗುವುದಿಲ್ಲ ಎಂದು ಹೇಳುತ್ತಿದ್ದಂತೆ ಅಧಿಕಾರಿ ತಲೆತಗ್ಗಿಸಿ ಕುಳಿತು ಕಣ್ಣೀರಿಟ್ಟರು.

ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಚಿವರಿಗೆ ಸಲ್ಲಿಸಿದ್ದ ಮಾಹಿತಿ ಪುಸ್ತಕದಲ್ಲಿನ ಅಂಕಿ-ಅಂಶಗಳು ಹಾಗೂ ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಬಸವರಾಜ ರಾಯರೆಡ್ಡಿ ಗರಂ ಆದರು. ಬೆಳೆ ಹಾನಿ, ಬಿತ್ತನೆ ಹಾಗೂ ಉತ್ಪಾದನೆಗೆ ಸಂಬಂಧಿಸಿದಂತೆ ನೀಡಲಾದ ಮಾಹಿತಿಯಲ್ಲಿ ಗೊಂದಲ ಇರುವುದನ್ನು ಸಚಿವರು ಪ್ರಶ್ನಿಸಿದರು.

ಸಭೆಯಲ್ಲಿ ಸಚಿವ ರಾಯರೆಡ್ಡಿ ವಿವಿಧ ಬೆಳೆಗಳ ಸ್ಥಿತಿಗತಿ ಕುರಿತು ಪ್ರಶ್ನೆಗಳನ್ನು ಕೇಳಿದಾಗ ಕೃಷಿ ಅಧಿಕಾರಿ ಚೇತನಾ ಪಾಟೀಲ ಸಮರ್ಪಕ ಮಾಹಿತಿ ನೀಡಲು ಪರದಾಡಿದರು.