SK Home Ad
Home ನಮ್ಮ ಜಿಲ್ಲೆ ಧಾರವಾಡ ಗಣೇಶ ಹಬ್ಬಕ್ಕೆ ಡಿಜೆ ಸೌಂಡ್‌ ಹಾಕ್ತೀರಾ? ₹ 1,00,000 ದಂಡ ಕಟ್ಟಬೇಕಾದೀತು!

ಗಣೇಶ ಹಬ್ಬಕ್ಕೆ ಡಿಜೆ ಸೌಂಡ್‌ ಹಾಕ್ತೀರಾ? ₹ 1,00,000 ದಂಡ ಕಟ್ಟಬೇಕಾದೀತು!

0
174

ಧಾರವಾಡ: ಗಣೇಶ ಹಬ್ಬದಲ್ಲಿ ಮಿತಿ ಮೀರಿದ ಧ್ವನಿವರ್ಧಕ (ಡಿಜೆ ಸೌಂಡ್ ಸಿಸ್ಟಮ್) ಬಳಸಿದರೆ 1 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಿಓಪಿ ಗಣೇಶ ವಿಗ್ರಹಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಮಿತಿ ಮೀರಿದ ಸೌಂಡ್ ಸಿಸ್ಟಮ್ (ಡಿಜೆ) ಕಂಡುಬಂದಲ್ಲಿ ಅಧಿಕಾರಿಗಳು ಜಪ್ತಿ ಮಾಡಿ, 1 ಲಕ್ಷದವರೆಗೂ ದಂಡ ವಿಧಿಸಲು ಜಿಲ್ಲಾಧಿಕಾರಿ ಸೂಚಿಸಿದರು.

ಗೌರಿಗಣೇಶ ಹಬ್ಬಕ್ಕೆ ಡಿಜೆ ಸೌಂಡ ಸಿಸ್ಟಮ್ ನಿಷೇಧಿಸಲಾಗಿದ್ದು, ಡಿ.ಜೆ. ಸೌಂಡ್ ಸಿಸ್ಟಮ್ ಹಚ್ಚುವುದರಿಂದ ಗ್ರಾಮ ಹಾಗೂ ನಗರಗಳಲ್ಲಿಯ ವೃದ್ಧರಿಗೆ, ಚಿಕ್ಕ ಮಕ್ಕಳಿಗೆ, ಗರ್ಭಿಣಿಯರಿಗೆ ತೊಂದರೆಯಾಗುತ್ತಿದ್ದು, ಡಿ.ಜೆ ಹಚ್ಚುವ ಬದಲಾಗಿ ಡೊಳ್ಳು ಕುಣಿತ, ಹೆಜ್ಜೆ ಮೇಳ, ಕರಡಿ ಮಜಲು ಅಂತಹ ಸಾಂಪ್ರದಾಯಿಕ ಜನಪದ ಕಲೆಗಳನ್ನು ಮಾಡಿಸಿ, ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ.) ವಿಗ್ರಹಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಇದು ಕಾನೂನುಬಾಹಿರ. ಅಧಿಕಾರಿಗಳು ನಗರಾದ್ಯಂತ ದಿಢೀರ ದಾಳಿ ನಡೆಸಿ, ಅಂತಹ ವಿಗ್ರಹಗಳು ಸಿಕ್ಕರೆ, ತಕ್ಷಣ ವಶಪಡಿಸಿಕೊಳ್ಳಬೇಕು. ಮತ್ತು ಮಾರಾಟಗಾರರಿಗೆ ದಂಡ ವಿಧಿಸಬೇಕು. ಗಣಪತಿ ವಿಗ್ರಹ ಮಾರಾಟಗಾರರು ಪರಿಸರಸ್ನೇಹಿ ಮಣ್ಣಿನ ಗಣಪತಿಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಹೇಳಿದರು.

ಜಿಲ್ಲಾಡಳಿತವು ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅನಿರೀಕ್ಷಿತ ಭೇಟಿ ಮೂಲಕ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿ, ಪಿಓಪಿ ವಿಗ್ರಹಗಳನ್ನು ತಡೆಗಟ್ಟಲು ಕ್ರಮವಹಿಸಿವೆ ಎಂದು ತಿಳಿಸಿದರು.

ಚೆಕ್‌ಪೋಸ್ಟ್: ಬೇರೆ ಜಿಲ್ಲೆಗಳಿಂದ ನಮ್ಮ ನಗರ ಮತ್ತು ಪಟ್ಟಣಕ್ಕೆ ಪಿ.ಓ.ಪಿ. ವಿಗ್ರಹಗಳು ಬರದಂತೆ ತಡೆಯಲು ಜಿಲ್ಲೆಯ ಗಡಿ ಭಾಗಗಳಲ್ಲಿ ಹಾಗೂ ಮಹಾನಗರದ ಗಡಿಯಲ್ಲಿ
ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು. ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.