SK Home Ad
Home ನಮ್ಮ ಜಿಲ್ಲೆ ಧಾರವಾಡ ಮುಖ್ಯಮಂತ್ರಿ ತಕ್ಷಣ ಬರಗಾಲ ಘೋಷಣೆ ಮಾಡಲಿ: ಬೊಮ್ಮಾಯಿ

ಮುಖ್ಯಮಂತ್ರಿ ತಕ್ಷಣ ಬರಗಾಲ ಘೋಷಣೆ ಮಾಡಲಿ: ಬೊಮ್ಮಾಯಿ

0
48
Filephoto

ಹುಬ್ಬಳ್ಳಿ: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಇನ್ನೊಂದು ವಾರದೊಳಗೆ ಸಮರ್ಪಕ ಮಳೆಯಾಗದಿದ್ದರೆ ಕರ್ನಾಟಕ ಸಂಪೂರ್ಣ ಬರಗಾಲದತ್ತ ಸಾಗುವ ಸಾಧ್ಯತೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ತಕ್ಷಣವೇ ಜಿಲ್ಲಾಧಿಕಾರಿಗಳ ಸಭೆ ನಡೆಸಿ ರಾಜ್ಯದಲ್ಲಿ ಬರಗಾಲ ಘೋಷಿಸುವಂತೆ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ರಾಜ್ಯದಲ್ಲಿ ಈವರೆಗೆ ಕೇವಲ ಶೇ.30ರಷ್ಟು ಮಾತ್ರ ಬಿತ್ತನೆಯಾಗಿದ್ದು, ಶೇ.70ರಷ್ಟು ಪ್ರದೇಶಗಳಲ್ಲಿ ಇನ್ನೂ ಬಿತ್ತನೆ ಪ್ರಾರಂಭವಾಗಿಲ್ಲ ಎಂದು ತಿಳಿಸಿದರು. ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮುಂದಿನ ಒಂದು ವಾರದಲ್ಲಿಯೂ ಮಳೆ ಬಾರದಿದ್ದರೆ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರ ಸ್ವರೂಪ ಪಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: ಕೊಪ್ಪಳದಲ್ಲಿ ಭೀಕರ ಅಪಘಾತ: ಮಂತ್ರಾಲಯ ಯಾತ್ರೆ ಹೊರಟಿದ್ದ ನಾಲ್ವರು ಸಾವು!

ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕಿದ್ದು, ಎಲ್ಲ ಜಿಲ್ಲಾಧಿಕಾರಿಗಳ ಸಭೆ ನಡೆಸಿ ವಾಸ್ತವ ಸ್ಥಿತಿಯ ವರದಿ ಪಡೆಯಬೇಕು. ಬರ ಪರಿಹಾರ ಕ್ರಮಗಳನ್ನು ತುರ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಹಣ ಲಭ್ಯವಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡಿದರೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ನೆರವು ಪಡೆಯಲು ಸಾಧ್ಯವಾಗುತ್ತದೆ ಎಂದರು.

ರಾಜ್ಯದಲ್ಲಿ ಮಳೆ ಇಲ್ಲದೆ ಕೆರೆಗಳು ಹಾಗೂ ಜಲಾಶಯಗಳಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಸಮರ್ಪಕ ಕೃಷಿ ಸಚಿವರೇ ಇಲ್ಲದಿರುವುದು ದುರದೃಷ್ಟಕರ ಎಂದು ಬೊಮ್ಮಾಯಿ ಟೀಕಿಸಿದರು. ಎರಡು ಅಥವಾ ಮೂರು ಜಿಲ್ಲೆಗಳಿಗೆ ಒಬ್ಬ ಸಚಿವರನ್ನು ನೇಮಿಸಿರುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಚಿತ್ರಕಥೆಯ ಮಾಂತ್ರಿಕ, ಖ್ಯಾತ ನಟ-ನಿರ್ದೇಶಕ ಕೆ. ಭಾಗ್ಯರಾಜ್ ಇನ್ನಿಲ್ಲ

ಎಲ್ನಿನೋ ಪರಿಣಾಮ ಹಾಗೂ ಸಂಭವನೀಯ ಬರ ಪರಿಸ್ಥಿತಿಯ ಕುರಿತು ರಾಷ್ಟ್ರೀಯ ವರದಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ತಕ್ಷಣ ಬರ ಪರಿಸ್ಥಿತಿ ನಿರ್ವಹಣೆಯತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.